ವರದಿ ಸ್ವೀಕರಿಸದೇ ಸಮೀಕ್ಷಾ ಸಮಿತಿ ವಜಾಗೊಳಿಸಿದ ಸರಕಾರ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್

Update: 2019-09-23 12:14 GMT

ಬೆಂಗಳೂರು, ಸೆ. 23: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಸರಕಾರ ಸ್ವೀಕರಿಸುತ್ತಿಲ್ಲ. ಅಲ್ಲದೆ, ಸಮೀಕ್ಷೆಯ ಸಮಿತಿಯನ್ನು ವಜಾಗೊಳಿಸಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ತಯಾರು ಅದಾಗಿನಿಂದಲೂ ವರದಿಯನ್ನು ಸ್ವೀಕರಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಕಾರವನ್ನು ಮನವಿ ಮಾಡುತ್ತಿದೆ. ಹಿಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿತ್ತು. ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಆಯೋಗ ಭೇಟಿ ಮಾಡಿ ವರದಿ ಸಲ್ಲಿಸಲು ಕಾಲಾವಕಾಶ ಕೋರಲಾಗಿತ್ತು. ಆದರೂ ಅವಕಾಶ ದೊರೆಯಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ಸೆ.21ರಂದು ರದ್ದುಪಡಿಸಿದ್ದು, ಅದೇ ದಿನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಆಯೋಗದ ಸದಸ್ಯ ಕಾರ್ಯದರ್ಶಿ ಪಿ.ವಸಂತ್‌ಕುಮಾರ್‌ಗೆ ಸಮೀಕ್ಷೆಗೆ ಸಂಬಂಧಿಸಿದ ವರದಿಗಳನ್ನು ಸಲ್ಲಿಸಲಾಗಿದೆ. ಹೀಗಾಗಿ, ಆಯೋಗದ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿರುವ ವರದಿಗಳನ್ನು ಸರಕಾರ ಸ್ವೀಕರಿಸಿದ ನಂತರ ಪ್ರಕಟಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015ರ ಸಮಗ್ರ ರಾಜ್ಯ ವರದಿ, ಜಾತಿ ಮತ್ತು ವರ್ಗಗಳ ಪ್ರಮುಖ ಲಕ್ಷಣಗಳ 8 ಸಂಪುಟಗಳು, ಎಸ್ಸಿ, ಎಸ್ಟಿಗೆ ಸಂಬಂಧಪಟ್ಟ ತಲಾ ಒಂದೊಂದು ಸಂಪುಟ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮಾಹಿತಿಯ ಜಾತಿ, ವರ್ಗವಾರು 4 ಸಂಪುಟಗಳು, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯ ಕುರಿತು ವಿವಿಧ ಮೂಲಗಳಿಂದ ಪಡೆದ ವಿವರಗಳ ಒಂದು ಸಂಪುಟ, 2018ರ ವಿಶೇಷ ವರದಿ ಹಾಗೂ ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶ ಗಳ ಪ್ರಮುಖ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸದಸ್ಯ ಕಾರ್ಯದರ್ಶಿಗೆ ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, 2014ರ ಜನವರಿ 23ರಂದೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಆದೇಶಿಸಲಾಗಿತ್ತು. ನಮ್ಮ ಆಯೋಗವು 2014ರ ಜೂನ್‌ನಿಂದ ಕಾರ್ಯಾರಂಭ ಮಾಡಿ ಮೇಲಿನ ವರದಿಗಳನ್ನು ಸಿದ್ಧಪಡಿಸಿದೆ. ಈ ಸಮೀಕ್ಷೆಯನ್ನು ನಿರ್ವಹಿಸಲು 158 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ವರದಿಗೆ ಸಂಬಂಧಪಟ್ಟಂತೆ ಒಂದು ವರ್ಷದ ಹಿಂದೆಯೇ ಅಂಕಿ-ಅಂಶಗಳ ಕ್ರೋಡೀಕರಣ, ವಿಶ್ಲೇಷಣೆಗಳನ್ನು ಆಯೋಗ ಅಂತಿಮ ಗೊಳಿಸಿತ್ತು. ಮನೆ ಮನೆ ಗಣತಿ ಮಾಡಿ ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಕೌಟುಂಬಿಕ ಹಾಗೂ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ 55 ಅಂಶಗಳ ಮಾಹಿತಿಯನ್ನು ಗಣತಿಯಲ್ಲಿ ಆಯೋಗ ಪಡೆಸಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಗದ ನಿರ್ಗಮಿತ ಸದಸ್ಯರಾದ ಎನ್.ಪಿ.ಧರ್ಮರಾಜ್, ಶರಣಪ್ಪ ಡಿ.ಮಾನೇಗಾರ್ ಹಾಗೂ ಜಿ.ಡಿ.ಗೋಪಾಲ್ ಉಪಸ್ಥಿತರಿದ್ದರು.

ಸಮೀಕ್ಷೆಯ ಅಂಕಿ-ಅಂಶ

* ವೆಚ್ಚ 158 ಕೋಟಿ ರೂ.

* ಸಿಬ್ಬಂದಿ 1,58,047

* ಗಣತಿದಾರರು 1,33,140

* ಮೇಲ್ವಿಚಾರಕರು 22,189

* ತರಬೇತಿದಾರರು 2118

ವರದಿಯಲ್ಲಿ ಜಾತಿ ಸಂಖ್ಯೆಯಷ್ಟೇ ಅಲ್ಲದೆ, ಆರ್ಥಿಕ, ಸಾಮಾಜಿಕ ಹಾಗೂ ಶಿಕ್ಷಣದ ಬಗ್ಗೆಯೂ ಮಾಹಿತಿ ಸಿಗಲಿದೆ. ವರದಿ ಕೇವಲ ಹಿಂದುಳಿದ ವರ್ಗಗಳಿಗೆ ಸೀಮಿತವಾಗಿಲ್ಲ. ಮುಂದುವರೆದ ಜಾತಿಗಳ ಪರಿಸ್ಥಿತಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ.

-ಎಚ್.ಕಾಂತರಾಜ್, ಆಯೋಗದ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News