ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ: ದಾಖಲೆಗಳು ವಶ

Update: 2019-09-26 13:35 GMT

ಬೆಂಗಳೂರು, ಸೆ.26: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕಣರದ ಸಂಬಂಧ ಸಿಬಿಐ ಅಧಿಕಾರಿಗಳು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು, ವಿಚಾರಣೆ ನಡೆಸಿದ್ದಾರೆ.

ಗುರುವಾರ ಬೆಳಗ್ಗೆ ನಗರದ ಜಾನ್ಸನ್ ಮಾರ್ಕೆಟ್ ಬಳಿಯ ಕೆಎಸ್ಸಾರ್ಪಿ ಎಡಿಜಿಪಿ ಅಲೋಕ್ ಕುಮಾರ್ ನಿವಾಸದ ಮೇಲೆ 20 ಮಂದಿ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಫೋನ್ ಕದ್ದಾಲಿಕೆಗೆ ಸಂಬಂಧ ಮಾಹಿತಿ ಸಂಗ್ರಹಿಸಿಟ್ಟಿದ್ದಾರೆ ಎನ್ನಲಾದ ಪೆನ್‌ಡ್ರೈವ್, ಲ್ಯಾಪ್‌ಟಾಪ್ ಇನ್ನಿತರೆ ಮಹತ್ವದ ದಾಖಲೆಗಳ ಬಗ್ಗೆ ಶೋಧ ನಡೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿದ್ದು, ಆ.1, 2018ರಿಂದ ಆ.19, 2019ರ ಅವಧಿಯವರೆಗೆ ತನಿಖೆ ನಡೆಸುವಂತೆ ಆದೇಶದಲ್ಲಿ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಅಲೋಕ್ ಕುಮಾರ್‌ನ್ನು ವಿಚಾರಣೆ ನಡೆಸಲಾಗಿದೆ.

ಗುರುವಾರ ಸುಮಾರು ಎಂಟು ಗಂಟೆವರೆಗೆ ಎಡಿಜಿಪಿ ಅಲೋಕ್‌ ಕುಮಾರ್ ಮನೆಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡ ಸಿಬಿಐ ಅಧಿಕಾರಿಗಳು, ಕಿರಣ್‌ ಕುಮಾರ್ ನೇತೃತ್ವದ ತಂಡ ಪೆನ್‌ಡ್ರೈವ್ ಮತ್ತು ದಾಖಲೆಗಳ ಹುಡುಕಾಟ ನಡೆಸಿದೆ. ಇದೇ ವೇಳೆ ಪ್ರಕರಣ ಸಂಬಂಧ ಮತ್ತೊಂದು ತಂಡ ಅಲೋಕ್‌ಕುಮಾರ್‌ನ್ನು ವಿಚಾರಣೆ ನಡೆಸಿ, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎನ್ನಲಾಗಿದೆ.

ಡಿಜಿ ಮತ್ತು ಐಜಿಪಿ ಕಚೇರಿಯಲ್ಲೂ ಪರಿಶೀಲನೆ: ನೃಪತುಂಗ ರಸ್ತೆಯಲ್ಲಿರುವ ಡಿಜಿ, ಐಜಿಪಿ ಕಚೇರಿ ಹಾಗೂ ಅಲೋಕ್ ಕುಮಾರ್ ಕಚೇರಿಯಲ್ಲೂ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News