ಕೇಂದ್ರ ಸರ್ಕಾರ ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದೆ: ಕೆ.ಸಿ.ವೇಣುಗೋಪಾಲ್

Update: 2019-09-26 12:22 GMT

ಬೆಂಗಳೂರು, ಸೆ.26: 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಪ್ರಬಲ ಅಭ್ಯರ್ಥಿಗಳನ್ನೆ ಕಣಕ್ಕಿಳಿಸಲಿದೆ. ಅದರ ಅಂಗವಾಗಿ ಇಂದು ನಾವೆಲ್ಲ ಸೇರಿ ಸಭೆ ಮಾಡಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕಾರಣದಿಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿನ ಸಭೆಗೆ ಗೈರು ಹಾಜರಾಗಿದ್ದಾರೆ. ಎಲ್ಲ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ ಎಂದರು.

ರಾಜ್ಯ ಬಿಜೆಪಿ ಸರಕಾರದ ಬಗ್ಗೆ ಉತ್ತಮ ಜನಾಭಿಪ್ರಾಯವಿಲ್ಲ. 15 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿಯೇ ಇಂದಿನ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ಭೇಟಿ ಮಾಡುವುದಾಗಿ ಅವರು ಹೇಳಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಕಾಂಗ್ರೆಸ್ ಮುಖಂಡರನ್ನು ಉದ್ದೇಶಪೂರ್ವಕವಾಗಿಯೇ ಗುರಿ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ವೇಣುಗೋಪಾಲ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ವಿಸ್ತೃತವಾಗಿ ಚರ್ಚೆಯಾಗಿದೆ. ಎಲ್ಲ ನಾಯಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಯಾವ ಮುಖಂಡರು ಪರಸ್ಪರ ವಾಗ್ದಾಳಿ, ಮಾತಿನ ಚಕಮಕಿ ನಡೆಸಿಲ್ಲ ಎಂದರು.

ಸಭೆಯಲ್ಲಿ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಬೇಡವೇ? ತಮ್ಮ ತಮ್ಮ ಅಭಿಪ್ರಾಯಗಳನ್ನು ನಾಯಕರು ಹಂಚಿಕೊಂಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಯಾವ ತೀರ್ಪು ಬರುತ್ತೋ ಅದನ್ನು ಕಾದು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ನಾಳೆ ಅಥವಾ ನಾಡಿದ್ದು ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಪರಮೇಶ್ವರ್ ಕಾರಣಾಂತರದಿಂದ ಸಭೆಗೆ ಬಂದಿಲ್ಲ. ಈ ವಿಚಾರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೂ ಮಾಹಿತಿ ನೀಡಿದ್ದಾರೆ. ಯಾವುದೇ ಅಸಮಾನಧಾನ ಅವರಿಗಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಂಸದ ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ವಿಷ್ಣು ನಾಥನ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಝಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ಸಂಭಾವ್ಯ ಅಭ್ಯರ್ಥಿಗಳು

ಹೊಸಕೋಟೆ- ಪದ್ಮಾವತಿ ಸುರೇಶ್, ಕೆ.ಆರ್.ಪುರ- ಎಂ.ನಾರಾಯಣಸ್ವಾಮಿ, ಕೆ.ಆರ್.ಪೇಟೆ-ಕೆ.ಬಿ.ಚಂದ್ರಶೇಖರ್/ಚಲುವರಾಯಸ್ವಾಮಿ, ಹುಣಸೂರು- ಎಚ್.ಪಿ.ಮಂಜುನಾಥ್, ಗೋಕಾಕ್-ಲಖನ್ ಜಾರಕಿಹೊಳಿ, ಕಾಗವಾಡ- ಪ್ರಕಾಶ್ ಹುಕ್ಕೇರಿ, ರಾಣೇಬೆನ್ನೂರು-ಕೆ.ಬಿ.ಕೋಳಿವಾಡ, ಹೊಸಪೇಟೆ- ಸೂರ್ಯ ನಾರಾಯಣ ರೆಡ್ಡಿ, ಮಹಾಲಕ್ಷ್ಮಿ ಲೇಔಟ್-ಎಚ್.ಸಿ.ಬಾಲಕೃಷ್ಣ, ಶಿವಾಜಿನಗರ- ಎ.ಆರ್.ಝಾಕಿರ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದು, ಇನ್ನುಳಿದಂತೆ ಅಥಣಿ, ಯಶವಂತಪುರ, ಯಲ್ಲಾಪುರ, ಚಿಕ್ಕಬಳ್ಳಾಪುರ ಹಾಗೂ ಹಿರೇಕೆರೂರು ಕ್ಷೇತ್ರಗಳಲ್ಲಿ ಗೊಂದಲ ಮುಂದುವರೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News