ಕಸ್ಟಡಿ ಸಾವು ಪ್ರಕರಣ: ಸಂಜೀವ್ ಭಟ್ ಜಾಮೀನು ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

Update: 2019-09-26 10:00 GMT

ಅಹ್ಮದಾಬಾದ್, ಸೆ.26: ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ನಡೆದ ಜಾಮ್ನಗರ್ ಕಸ್ಟಡಿ ಸಾವು ಪ್ರಕರಣದಲ್ಲಿ ಜಾಮ್ನಗರ್ ಸೆಶನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಹಾಗೂ ಇನ್ನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಹ್  ಝಾಲ ಅವರ ಜಾಮೀನು ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಈ ವರ್ಷದ ಜೂನ್ ತಿಂಗಳಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು.

ಅವರ ಮನವಿಗಳನ್ನು ಮನ್ನಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ವಿಭಾಗೀಯ ಪೀಠ ಹೇಳಿತು. ಇನ್ನು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸುವ ಹೊರತಾಗಿ ಇಬ್ಬರಿಗೂ ಅನ್ಯಮಾರ್ಗವಿಲ್ಲವಾಗಿದೆ.

ಕಸ್ಟಡಿ ಸಾವು ಸಂಭವಿಸಿದ ಸಂದರ್ಭ ಭಟ್ ಅವರು ಜಾಮ್ನಗರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಪೊಲೀಸ್ ಹಿಂಸೆಯಿಂದಾಗಿ ಅಂಗ ವೈಫಲ್ಯ ಹಾಗೂ  ಹೃದಯ ಸ್ಥಂಭನದಿಂದ ಪ್ರಭುದಾಸ್ ಎಂಬಾತ ಮೃತಪಟ್ಟಿದ್ದಾನೆಂಬ ವೈದ್ಯಕೀಯ ವರದಿಗಳನ್ನಾಧರಿಸಿ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಕ್ಟೋಬರ್ 1990ರಲ್ಲಿ ರಥಯಾತ್ರೆ ಸಂದರ್ಭ ಅಡ್ವಾಣಿಯವರನ್ನು ಬಂಧಿಸಿದ್ದನ್ನು ವಿರೋಧಿಸಿ ಆಯೋಜಿಸಲಾದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕೆ ಬಂಧಿಸಲ್ಪಟ್ಟಿದ್ದ 133 ಮಂದಿಯಲ್ಲಿ ಪ್ರಭುದಾಸ್ ಒಬ್ಬನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News