ದುಡಿಯುವ ಜನರ ಮೊದಲ ಸಿದ್ಧಾಂತ

Update: 2019-09-26 18:30 GMT

 ಭಾರತದ ಇತಿಹಾಸದಲ್ಲಿ ಶೂದ್ರರ ಮತ್ತು ಅತಿಶೂದ್ರರಾದ ಪಂಚಮರ ಅನುಭವಕ್ಕೆ ಯಾವುದೇ ಬೆಲೆ ಇರಲಿಲ್ಲ. ವೇದ, ಶಾಸ್ತ್ರ, ಪುರಾಣಗಳು ಸವರ್ಣೀಯರ ಜೀವನವಿಧಾನಕ್ಕೆ ಧಕ್ಕೆ ತರದಂಥ ಸಂಸ್ಕಾರಗಳನ್ನೇ ಪ್ರತಿಪಾದಿಸುತ್ತವೆ. ಅವು ಮೇಲ್ನೋಟಕ್ಕೆ ಬಹಳ ಉದಾತ್ತವಾಗಿ ಕಂಡರೂ ಆಂತರ್ಯದಲ್ಲಿ ಕಾಯಕಜೀವಿಗಳ ಶೋಷಣೆಗೆ ಪೂರಕವಾಗಿಯೆ ಇವೆ. ಅಂತೆಯ ಬಸವಣ್ಣನವರು ‘‘ಏನಯ್ಯ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯ? ತಮಗೊಂದು ಬಟ್ಟೆ (ದಾರಿ) ಶಾಸ್ತ್ರಕ್ಕೊಂದು ಬಟ್ಟೆ!’’ ಎಂದು ನುಡಿದಿದ್ದಾರೆ. ‘‘ನುಡಿ ಲೇಸು ನಡೆ ಅಧಮವಾದಲ್ಲಿ ಬಿಡಿಸಲಾಗದ ಹೊೆ’’ ಎಂದು ಮಾದಾರ ಚೆನ್ನಯ್ಯನವರು ತಿಳಿಸಿದ್ದಾರೆ. ಬಸವಣ್ಣನವರು ಸಮಾಜದಲ್ಲಿ ರಕ್ತಗತವಾಗಿದ್ದ ತಾರತಮ್ಯಕ್ಕೆ ಕಾರಣವಾದ ವೈದಿಕ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸುತ್ತ ‘‘ವಿಪ್ರರು ಕೀಳು ನೋಡಾ ಜಗವೆಲ್ಲ ಅರಿಯಲು’’ ಎಂದು ಸಿಡಿಮಿಡಿಗೊಂಡಿದ್ದಾರೆ.

ಶೋಷಣೆಯಿಲ್ಲದ ಸಿದ್ಧಾಂತವನ್ನು ರೂಪಿಸುವುದಕ್ಕಾಗಿ ಶೋಷಿತರ ಬದುಕನ್ನು ಅರಿಯಲು ಎಲ್ಲ ಕಾಯಕಜೀವಿಗಳ ಅನುಭವವನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಬಸವಣ್ಣನವರು ಮಹಾನುಭಾವಿಗಳಾದರು. ಶ್ರಮಜೀವಿಗಳ ಅನುಭವದಿಂದ ಸೃಷ್ಟಿಯಾದ ಅನುಭಾವವೇ ಬಸವಾದ್ವೈತವೆಂಬ ಸಿದ್ಧಾಂತ. ಈ ಅನುಭಾವವೇ ಶರಣರ ಅಧ್ಯಾತ್ಮ, ತತ್ತ್ವಜ್ಞಾನ ಮತ್ತು ದರ್ಶನ.

ಕಾಯಕಜೀವಿಗಳ ಶ್ರಮಸಿದ್ಧಾಂತದಿಂದ ವೈದಿಕರ ಅಧ್ಯಾತ್ಮ ಬಂದಿಲ್ಲ. ಆದರೆ ಶರಣರ ಅನುಭಾವ ಜನಸಮುದಾಯದ ಕಾಯಕಗಳ ಮೂಲಕ ದಕ್ಕಿದ ಅನುಭವದಿಂದ ರೂಪುಗೊಂಡದ್ದಾಗಿದೆ. ಬಸವಣ್ಣನವರು ದುಡಿಯುವ ಜನರ ಅನುಭವದ ಆಧಾರದ ಮೇಲೆ ಹೊಸ ಜಗತ್ತಿನ ಸಿದ್ಧಾಂತವನ್ನು ರೂಪಿಸಿದರು. ‘‘ಭಕ್ತಿ ಇಲ್ಲದ ಬಡವ ನಾನಯ್ಯಿ. ಕಕ್ಕಯ್ಯನ ಮನೆಯಲ್ಲೂ ಬೇಡಿದೆ. ಚೆನ್ನಯ್ಯನ ಮನೆಯಲ್ಲೂ ಬೇಡಿದೆ. ದಾಸಯ್ಯನ ಮನೆಯಲ್ಲೂ ಬೇಡಿದೆ. ಎಲ್ಲ ಪುರಾತರು ಸೇರಿ ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.’’ ಎಂದು ಬಸವಣ್ಣನವರು ಹೇಳಿದ್ದಾರೆ. ಎಲ್ಲ ದುಡಿಯುವ ಜನರ ಅನುಭವದಿಂದಾಗಿ ಬಸವಣ್ಣನವರ ಅನುಭವದ ಪಾತ್ರೆ ತುಂಬಿದೆ. ಆ ಸಮಸ್ತ ಅನುಭವದ ಪಾತ್ರೆಯಿಂದ ಅನುಭಾವ ಸೃಷ್ಟಿಯಾಗಿ ಬಸವಾದ್ವೈತ ಸಿದ್ಧಾಂತ ಸೃಷ್ಟಿಯಾಗಿದೆ. ಇದುವೆ ಬಸವದರ್ಶನದ ಅಡಿಪಾಯ.

ಹೀಗೆ ಬಸವಾದ್ವೈತವು ವಿಶ್ವದ ದುಡಿಯುವ ಜನರ ಮೊದಲ ಸಿದ್ಧಾಂತವಾಗಿದೆ. ವಸ್ತು ಮತ್ತು ಚೈತನ್ಯವನ್ನು ಬೇರ್ಪಡಿಸಲಿಕ್ಕಾಗದು. ಚೈತನ್ಯವಿಲ್ಲದೆ ವಸ್ತುವಿಲ್ಲ. ಒಂದು ದಿನ ವಸ್ತು ತನ್ನ ರೂಪವನ್ನು ಕಳೆದುಕೊಂಡು ಮತ್ತೆ ನಿರಾಕಾರವಾದ ಚೈತನ್ಯವಾಗುವುದು. ಇಡೀ ಜಗತ್ತು ಚೈತನ್ಯಮಯವಾದ ವಸ್ತುವಾಗಿದೆ. ಈ ವಸ್ತುವೇ ಸಕಲಜೀವರಾಶಿಯ ಅಸ್ತಿತ್ವಕ್ಕೆ ಕಾರಣವಾಗಿದೆ. ಚರಾಚರವೆಲ್ಲ ಜೀವಜಾಲದಲ್ಲಿರುವುದರಿಂದ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಮೇಲು ಕೀಳು ಎಂಬುವು ಮಾನವ ನಿರ್ಮಿತ. ಬಲಿಷ್ಠರ ಶೋಷಣೆಯ ಬುದ್ಧಿಯಿಂದಾಗಿ ‘‘ಇವನಾರವ ಇವನಾರವ’’ ಎಂಬ ತಾರತಮ್ಯ ಭಾವ ಮೂಡಿದೆ. ಇದನ್ನು ಅಳಿಸಿ ಹಾಕಿ ಇವ ‘‘ನಮ್ಮವ, ಇವ ನಮ್ಮವ’’ ಎಂಬ ಏಕೋಭಾವ ಮೂಡಿಸುತ್ತ ಸತ್ಯದ ದರ್ಶನ ಮಾಡಿಸುವುದೇ ಬಸವಾದ್ವೈತದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News