ಎಚ್ಚರಿಕೆ....! ದೇಶದಲ್ಲಿ ಎಲ್ಲರೂ ಸಂತೋಷದಿಂದಿದ್ದಾರೆ...!!

Update: 2019-09-27 06:26 GMT

ಪ್ರಧಾನಿಯಾದ ದಿನಗಳಿಂದ ನರೇಂದ್ರ ಮೋದಿ ಈ ದೇಶವನ್ನು ಸಂತೋಷದಿಂದಿಡಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ‘ನೋಟು ನಿಷೇಧ’ದಿಂದ ಹಿಡಿದು ‘ಟ್ರಾಫಿಕ್ ದಂಡ’ದ ವರೆಗೆ ಈ ದೇಶವನ್ನು ಸಂತುಷ್ಟವಾಗಿಡಲು ಅವರು ಹೆಣಗಿದ ರೀತಿ ಒಂದೆರಡಲ್ಲ. ‘ನೋಟು ನಿಷೇಧ’ ಘೋಷಣೆಯಾದಾಗ ಮಧ್ಯಮವರ್ಗವಂತೂ ಸಂಭ್ರಮದಿಂದ ಕುಣಿದಾಡಿತ್ತು. ಶ್ರೀಮಂತರೆಲ್ಲ ಬೀದಿಪಾಲಾಗುತ್ತಾರೆ, ಕಪ್ಪು ಹಣವೆಲ್ಲ ಸರಕಾರದ ತಿಜೋರಿ ಸೇರಿ ದೇಶ ಶ್ರೀಮಂತವಾಗುತ್ತದೆ, ರೂಪಾಯಿಯ ಬೆಲೆ ಡಾಲರ್‌ಗಿಂತ ದುಪ್ಪಟ್ಟಾಗುತ್ತದೆ...ಹೀಗೆ ಕೆಲವು ದಿನ ಅವರು ನಿಜಕ್ಕೂ ಸಂತೋಷದಿಂದಿದ್ದರು. ಬ್ಯಾಂಕ್‌ನ ಮುಂದೆ ತಮ್ಮದೇ ಹಣಕ್ಕಾಗಿ ಕ್ಯೂನಲ್ಲಿ ನಿಂತು ಸೈನಿಕರಂತೆ ದೇಶ ಸೇವೆ ಮಾಡಿದ ಸಂತೃಪ್ತಿಯಿಂದ ಓಡಾಡಿದ್ದರು. ಸೂಪರ್‌ಬಝಾರ್‌ನಲ್ಲಿ ನಗದಿನ ಬದಲು ಕಾರ್ಡ್‌ಗಳನ್ನು ಬಳಸಿ ದೇಶಭಕ್ತಿಯನ್ನು ಮೆರೆದು ಖುಷಿ ಪಟ್ಟಿದ್ದರು. ಇದಾದ ಬಳಿಕ ಜಿಎಸ್‌ಟಿ ತೆರಿಗೆ ಇಡೀ ದೇಶದ ಆಹಾರ ಪದಾರ್ಥಗಳ ಬೆಲೆಯನ್ನು ಇಳಿಸುತ್ತದೆ ಎಂದು ಸಂಭ್ರಮಿಸಿದರು. ಆದರೆ ಆ ಸಂತೋಷವೂ ಹೆಚ್ಚು ಸಮಯ ಬಾಳಲಿಲ್ಲ. ಪುಲ್ವಾಮ ದಾಳಿಯ ದುಃಖ ವನ್ನು ಸರ್ಜಿಕಲ್ ಸ್ಟ್ರೈಕ್‌ನ ಮೂಲಕ ತುಂಬಿದರು. ಚಂದ್ರನೆಡೆಗೆ ವಿಕ್ರಮ್ ಲ್ಯಾಂಡರ್ ಉಡಾವಣೆಯಾದಾಗ ದೇಶದ ಸಂತೋಷವನ್ನು ಸಂಭ್ರಮದಿಂದ ಆಚರಿಸಲು ಮೋದಿ ಇಸ್ರೋದಲ್ಲೇ ಹೋಗಿ ಕುಳಿತು ಬಿಟ್ಟರು. ಲ್ಯಾಂಡರ್ ವಿಫಲವಾದರೂ, ಮರುದಿನ ಅವರು ಇಸ್ರೋ ಸಿಬ್ಬಂದಿಯ ಜೊತೆಗೆ ತೆಗೆದ ಫೋಟೊಗಳು ದೇಶಕ್ಕೆ ಒಂದಿಷ್ಟು ಖುಷಿ ನೀಡಿದವು. ಮಧ್ಯಮವರ್ಗವಂತೂ ಒಂದು ಕೌಟುಂಬಿಕ ಧಾರಾವಾಹಿಯನ್ನು ವೀಕ್ಷಿಸಿದಂತೆ ಮೋದಿಯ ಕಣ್ಣೀರನ್ನು ಸಂಭ್ರಮಿಸಿದವು. ಇತ್ತೀಚೆಗೆ, ಟ್ರಾಫಿಕ್ ದಂಡ ಹೆಚ್ಚಳವಾದಾಗ, ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಇನ್ನೇನು ಬಗೆ ಹರಿದೇ ಬಿಟ್ಟಿತು ಎಂದು ಸಂತುಷ್ಟರಾದರು. ಆ ಎಲ್ಲ ಸಂತೋಷಗಳು ಕಳೆ ಕಳೆದುಕೊಳ್ಳುತ್ತಿದ್ದಂತೆಯೇ ಮೋದಿ ಅಮೆರಿಕದಲ್ಲಿ ಮಿಂಚುತ್ತಾ, ದೇಶವನ್ನು ಖುಷಿಪಡಿಸುತ್ತಿದ್ದಾರೆ. ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂದು ಮೋದಿ ಘಂಟಾಘೋಷವಾಗಿ ಹೇಳಿದಾಗ ಅನಿವಾಸಿ ಭಾರತೀಯರು ಘೋಷಣೆಕೂಗುತ್ತಾ ಸಂಭ್ರಮಿಸಿದರು. ಭಾರತೀಯ ಮಾಧ್ಯಮಗಳೂ ಆ ಸಂತೋಷದ ಜೊತೆಗೆ ಕೈ ಜೋಡಿಸಿದವು. ಹೀಗೆ ಮೋದಿಯವರು ಈ ದೇಶವನ್ನು ಖುಷಿಪಡಿಸಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, 2018ರ ಜಾಗತಿಕ ಸಂತುಷ್ಟ ವರದಿಯು ಭಾರತದ ಪರವಾಗಿಲ್ಲ ಎನ್ನುವುದೇ ಸದ್ಯದ ಅತ್ಯಂತ ದುಃಖದಾಯಕ ಸಂಗತಿಯಾಗಿದೆ. ವಿಶ್ವದ ಸಂತುಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ಪೋರ್ಚುಗಲ್ ದೇಶಗಳಿಗೆ ಕ್ರಮವಾಗಿ 75 ಹಾಗೂ 77ನೇ ಸ್ಥಾನಗಳನ್ನು ನೀಡಿದ್ದರೆ, ಭಾರತಕ್ಕೆ 133ನೇ ರ್ಯಾಂಕ್ ನೀಡಲಾಗಿದೆ ಹಾಗೂ ಅದು 132 ಸ್ಥಾನದಲ್ಲಿರುವ ಕಾಂಗೊ ಹಾಗೂ 134 ಸ್ಥಾನದಲ್ಲಿರುವ ನೈಜರ್‌ನ ಜೊತೆಯಲ್ಲಿದೆ.115ನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ ಕೂಡಾ ಭಾರತಕ್ಕಿಂತ ಹೆಚ್ಚು ಸಂತುಷ್ಟವಾಗಿದೆ. ಇನ್ನೊಂದೆಡೆ ಭಾರತದ ತಲಾ ಆದಾಯ ಜಿಡಿಪಿ ( 2036 ಡಾಲರ್-ಐಎಂಎಫ್)ಯು ಪಾಕಿಸ್ತಾನಕ್ಕಿಂತ ಅಧಿಕವಾಗಿದೆ (ಅಂದರೆ 1555 ಡಾಲರ್). ಮೋದಿಯು ಈ ದೇಶವನ್ನು ಇಷ್ಟೆಲ್ಲ ಸಂತೋಷಗೊಳಿಸುತ್ತಿರುವಾಗಲೂ, ವರದಿಯೇಕೆ ಭಾರತ ಸಂತುಷ್ಟವಾಗಿಲ್ಲ ಎಂಬ ‘ಭಾರತ ವಿರೋಧಿ’ ಹೇಳಿಕೆಗಳನ್ನು ನೀಡುತ್ತಿದೆ ಎನ್ನುವುದು ಚರ್ಚೆಗೊಳಗಾಗಬೇಕಾಗಿದೆ. 2018ರಲ್ಲಿ ಭಾರತೀಯ ಉಪಖಂಡದಲ್ಲಿ ಸಂತುಷ್ಟ ರಾಷ್ಟ್ರಗಳ ಸೂಚ್ಯಂಕದಲ್ಲಿ ಪಾಕಿಸ್ತಾನದ ಸೂಚ್ಯಂಕವು 30.7 ಆಗಿದ್ದು, ಭಾರತವನ್ನು (ಸಂತುಷ್ಟ ಸೂಚ್ಯಂಕ 35.7) ಹಿಂದಿಕ್ಕಿದೆ. ಭಾರತಕ್ಕೆ ಹೋಲಿಸಿದರೆ ಉಗ್ರರು, ಭಯೋತ್ಪಾದಕರು, ಬಡತನ ಇತ್ಯಾದಿಗಳಿಂದ ತುಂಬಿ ತುಳುಕುವ ದೇಶ ಪಾಕಿಸ್ತಾನ. ಆದರೆ ಪಾಕಿಸ್ತಾನಿಗಳು ಉದಾರತೆಯ ಸೂಚ್ಯಂಕದಲ್ಲೂ ಭಾರತಕ್ಕಿಂತ ಮುಂದಿದ್ದಾರೆ (0.216) ಎಂದು ವರದಿ ಹೇಳುತ್ತಿದೆ. ಈ ಶ್ರೇಣಿಯಲ್ಲಿ ಭಾರತದ ಸೂಚ್ಯಂಕವು 0.172 ಆಗಿದೆ. ಇಷ್ಟಾದರೂ ಭಾರತ ತನ್ನ ಪ್ರಯತ್ನ ನಿಲ್ಲಿಸಿಲ್ಲ ಎನ್ನುವುದು ಗಮನಾರ್ಹ. ಜಗತ್ತಿನ ಎಲ್ಲ ವೈಜ್ಞಾನಿಕ ಅನ್ವೇಷಣೆಗಳು ಭಾರತದಲ್ಲೇ ನಡೆದಿವೆ. ಇಲ್ಲಿರುವ ಮುಸ್ಲಿಮರ ವಾಸ್ತುಶಿಲ್ಪಗಳೆಲ್ಲವೂ ಪ್ರಾಚೀನಾ ದೇವಾಲಯಗಳಾಗಿದ್ದವು, ಆರ್ಯರು ಭಾರತೀಯರೇ ಆಗಿದ್ದಾರೆ ಎನ್ನುವ ಹೊಸ ಹೊಸ ಸಂತೋಷದ ವಿಷಯಗಳನ್ನು ಕೇಂದ್ರ ಸರಕಾರ ಸಂಶೋಧಿಸಿ ನೀಡುತ್ತಿದ್ದರೂ, ಭಾರತ ಸಂತುಷ್ಟವಾಗಿಲ್ಲ ಎನ್ನುವುದು ಅಚ್ಚರಿಯ ವಿಚಾರವೇ ಆಗಿದೆ. ಅಕ್ರಮ ವಲಸಿಗರನ್ನು ಹೊಡೆದಟ್ಟುವ ಕಾರ್ಯಕ್ರಮ ಬಹುತೇಕ ಮುಗಿದಿದೆ, ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಗೆ ಸರಿಯಾದ ಪಾಠಕಲಿಸಲಾಗಿದೆ, ರಾಮಾಯಣ ಮ್ಯೂಸಿಯಂ ತೆರೆಯಲಾಗಿದೆ, ವಿಶ್ವದಲ್ಲೇ ಅತಿದೊಡ್ಡ ಪಟೇಲ್ ಪ್ರತಿಮೆಯನ್ನು ಮೂರು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಾಜಿ ಪಾರ್ಕ್ ನಿರ್ಮಿಸಲಾಗಿದೆ. ಇಷ್ಟಾದರೂ ಈ ದೇಶ ಸಂತೋಷವಾಗಿಲ್ಲ ಎಂದರೆ ಅದು ನಂಬಲರ್ಹ ಸಂಗತಿಯೆ? ಸಂತುಷ್ಟತೆಗೆ ಅತಿ ಮುಖ್ಯ ಮಾನದಂಡ ಇನ್ನೊಂದಿದೆ. ಅದುವೇ ಕಡಿಮೆ ಆತ್ಮಹತ್ಯೆ ಪ್ರಮಾಣ. 23 ಆಗಸ್ಟ್ 2019ರ ಸಯನ್ಸ್ ಮ್ಯಾಗಝಿನ್ ಪತ್ರಿಕೆಯ ಮುಖಪುಟ ಲೇಖನವು ಆತ್ಮಹತ್ಯೆ ದುರಂತದ ಕುರಿತಾಗಿದೆ. ಜಾಗತಿಕ ಸರಾಸರಿ ಆತ್ಮಹತ್ಯೆ ಪ್ರಮಾಣವು ಪ್ರತಿ 1 ಲಕ್ಷ ಜನಸಂಖ್ಯೆಗೆ 10.5 ಆಗಿದೆ. ಭಾರತೀಯ ಉಪಖಂಡದ ರಾಷ್ಟ್ರಗಳ ಪೈಕಿ ಪಾಕಿಸ್ತಾನದಲ್ಲಿ ವರದಿಯಾಗುವ ಆತ್ಮಹತ್ಯೆಗಳ ಪ್ರಮಾಣವು ಪ್ರತಿ 1 ಲಕ್ಷ ಜನಸಂಖ್ಯೆಗೆ 4.5ಕ್ಕಿಂತಲೂ ಕಡಿಮೆಯಾಗಿದೆ. ಭಾರತದಲ್ಲಿ ಆತ್ಮಹತ್ಯೆ ಪ್ರಮಾಣವು ಕಳವಳಕಾರಿಯಾಗಿದ್ದು, 15.6ರಷ್ಟಿದೆ. ನಮ್ಮ ದೇಶದಲ್ಲಿ ಆತ್ಮಹತ್ಯೆಯ ನೈಜ ದರವು ಇದಕ್ಕೂ ಅಧಿಕವಾಗಿದೆ. ಯಾಕೆಂದರೆ ರೈತರ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯಗಳು ಮರೆಮಾಚುತ್ತವೆ ಎಂದು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಆಪಾದಿಸಿವೆ.

 ಅಚ್ಚರಿಯ ಸಂಗತಿಯೇನೆಂದರೆ ಕಡಿಮೆ ಪ್ರಮಾಣದ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವ ದೇಶಗಳು ಶ್ರೀಮಂತವಾಗಿಯೇನೂ ಇಲ್ಲ. ಇದಕ್ಕೆ ಪಾಕಿಸ್ತಾನ ಉದಾಹರಣೆಯಾಗಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಆತ್ಮಹತ್ಯೆ ಪ್ರಮಾಣವು ಪ್ರತಿ ಒಂದು ಲಕ್ಷ ಜನರಿಗೆ 51.1 ಆಗಿದ್ದು, ಇದು ವಿಶ್ವದಲ್ಲೇ ಗರಿಷ್ಠವಾಗಿದೆ. ಲಿಥುವಾನಿಯಾ 28.0 ಹಾಗೂ ರಶ್ಯ 25.1 ಆಗಿದೆ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಹಸಿವಿನಿಂದ ಸಾಯುವವರ ಸಂಖ್ಯೆ ಅಧಿಕವಾಗುತ್ತಿದೆ. ನಿರುದ್ಯೋಗಿ ಯುವಕರಲ್ಲಿ ಅಭದ್ರತೆ ಹೆಚ್ಚುತ್ತಿದೆ. ಭಾರತದ ಅವಿಭಾಜ್ಯ ಅಂಗವೆಂದು ಮೋದಿ ಘೋಷಿಸಿದ ದಿನದಿಂದ ಕಾಶ್ಮೀರ ದುಃಖಿತವಾಗಿದೆ. ಅಸ್ಸಾಮಿನಲ್ಲಿ ಲಕ್ಷಾಂತರ ಜನರು ಅತಂತ್ರಸ್ಥಿತಿಯಲ್ಲಿದ್ದು , ಖಿನ್ನತೆಗೊಳಗಾಗಿದ್ದಾರೆ. ಭಾಷಾ ಹೇರಿಕೆಯೂ ಜನರಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ. ದೇಶದೊಳಗೆ ಇಷ್ಟೆಲ್ಲ ಸಂಭವಿಸುತ್ತಿದ್ದರೂ ‘‘ದೇಶದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂದು ಮೋದಿ ಹೇಳುತ್ತಿದ್ದಾರೆ ಎಂದರೆ, ಅವರು ಇಲ್ಲಿನ ಶೇ. 2ರಷ್ಟು ಜನರನ್ನಷ್ಟೇ ದೇಶವೆಂದು ಭಾವಿಸಿದ್ದಾರೆ. ಆ ಶೇ. 2ರಷ್ಟು ಕಾರ್ಪೊರೇಟ್ ಮತ್ತು ಮೇಲ್‌ಜಾತಿಯ ಜನರ ಅವರಷ್ಟೇ ದೇಶವಾಗಿದ್ದರೆ, ಹೌದು, ದೇಶದಲ್ಲಿ ಎಲ್ಲವೂ ಚೆನ್ನಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News