ವಾಯು ಮಾಲಿನ್ಯದಿಂದ ಹೃದ್ರೋಗ ಹೆಚ್ಚುತ್ತಿದೆ: ಡಾ.ಸಿ.ಎನ್.ಮಂಜುನಾಥ್

Update: 2019-09-27 17:24 GMT

ಬೆಂಗಳೂರು, ಸೆ.27: ವಿಶ್ವಾದ್ಯಂತ ವಾಯು ಮಾಲಿನ್ಯದಿಂದ ಹೃದ್ರೋಗಗಳು ಹೆಚ್ಚುತ್ತಿದ್ದು, ಇದರಿಂದಾಗಿ ಟ್ರಕ್, ಲಾರಿ ಹಾಗೂ ಕಾರು ಚಾಲಕರು ಹೆಚ್ಚಾಗಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸಿದ್ಧಪಡಿಸಿದ ‘ಎಪಿಡೆಮಿಕ್ ಆಫ್ ಹಾರ್ಟ್‌ಅಟ್ಯಾಕ್ ಇನ್ ಯಂಗ್ ಇಂಡಿಯನ್ಸ್’ ಅಧ್ಯಯನ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆಸ್ಪತ್ರೆಯ ಪಿಸಿಎಡಿ ವಿಭಾಗದಲ್ಲಿ 2 ವರ್ಷದಲ್ಲಿ ದಾಖಲಾದ 2,400 ರೋಗಿಗಳ ಮೇಲೆ ಅಧ್ಯಯನ ಮಾಡಲಾಗಿದೆ. ಒಟ್ಟು ರೋಗಿಗಳ ಪೈಕಿ ಶೇ.25 ರಷ್ಟು ಮಂದಿ 30 ವರ್ಷದೊಳಗಿನವರು, ಶೇ.30 ರಷ್ಟು 30-35 ವರ್ಷದವರು, ಶೇ.45 ರಷ್ಟು 36-40 ವರ್ಷದವರಾಗಿದ್ದಾರೆ. ಶೇ.9ರಷ್ಟು ಮಹಿಳೆಯರು ಹಾಗೂ ಶೇ.91 ರಷ್ಟು ಪುರುಷರಾಗಿದ್ದಾರೆ ಎಂದು ತಿಳಿಸಿದರು.

ಇನ್ನು, ಶೇ.40ರಷ್ಟು ಯುವಕರಿಗೆ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಬಿಪಿ, ಮಧುಮೇಹ ಇಲ್ಲ. ಆದರೆ, ವಾಯು ಮಾಲಿನ್ಯದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬಂದಿವೆ. ಮಾಲಿನ್ಯ ನಿಯಂತ್ರಣ ಅಗತ್ಯ ಮತ್ತು ಅನಿವಾರ್ಯವಾಗಿದೆ. ಮಧುಮೇಹ, ವ್ಯಾಯಾಮ ಇಲ್ಲದ ಜೀವನ ಹೃದಯಾಘಾತಕ್ಕೆ ಸಾಮಾನ್ಯ ಕಾರಣ. ಆದರೆ, ವಾಯು ಮಾಲಿನ್ಯದಿಂದಲೂ ಹೃದಯ ಸಂಬಂಧ ರೋಗಗಳು ಬರುತ್ತಿದ್ದು, ಸಿಗರೇಟ್ ಗಾಳಿ ಸೇವನೆಯಿಂದಲೂ ಹೃದ್ರೋಗಕ್ಕೆ ಒಳಗಾಗಬೇಕಾಗುತ್ತದೆ ಎಂಬ ಅಂಶ ಸಂಶೋಧನೆಯಿಂದ ಬಯಲಾಗಿದೆ ಎಂದು ಹೇಳಿದರು.

ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಮಾತನಾಡಿ, ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ವಾಯು ಮಾಲಿನ್ಯವೂ ಪ್ರಮುಖ ಕಾರಣ ಎಂಬ ಅಂಶ ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಯನದಲ್ಲಿ ತಿಳಿದು ಬಂದಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುವುದು. ಪರಿಸರಕ್ಕೆ ಆದ್ಯತೆ ನೀಡಿದರೆ ಮಾತ್ರ ಓಟ್ ಹಾಕುವುದಾಗಿ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರೆ ಸುಧಾರಣೆ ಸಾಧ್ಯ ಎಂದರು.

ಪ್ರಸ್ತುತ ಯುವಕರ ಆರೋಗ್ಯ ಗುಣಮಟ್ಟ ಕುಸಿಯುತ್ತಿದ್ದು, ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ಯೋಗ, ವ್ಯಾಯಾಮ ಸೇರಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈಗಾಗಲೇ ನವದೆಹಲಿಯಲ್ಲಿ ವಾಯುಮಾಲಿನ್ಯದಿಂದ ಉಸಿರಾಡಲು ತೊಂದರೆಯಾಗಿದೆ. ಇಂಥ ಪರಿಸ್ಥಿತಿ ಬೆಂಗಳೂರಿಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಸಮಾರಂಭದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಸ್ಟೆಪ್ ಸೆಂಟರ್ ಾರ್ ಏರ್ ಪೊಲ್ಯೂಶನ್ ಸ್ಟಡೀಸ್‌ನ ಡಾ.ಪ್ರತಿಮಾ ಸಿಂಗ್, ಪಾಲಿಕೆ ಸದಸ್ಯ ಗೋವಿಂದ ನಾಯ್ಡು ಉಪಸ್ಥಿತರಿದ್ದರು.

ಸಂಚಾರ ದಟ್ಟಣೆಯಲ್ಲಿ 5 ನಿಮಿಷ ನಿಂತು ಗಾಳಿ ಸೇವಿಸಿದರೆ, ಒಂದೇ ಬಾರಿಗೆ 5 ಸಿಗರೇಟ್ ಸೇವಿಸಿದಂತೆ. ಆದ್ದರಿಂದ ವಾಯುಮಾಲಿನ್ಯ ಇರುವ ಕಡೆ ಮಾಸ್ಕ್ ಬಳಸಬೇಕು.

-ಡಾ.ಸಿ.ಎನ್.ಮಂಜುನಾಥ್, ಜಯದೇವದ ನಿರ್ದೇಶಕ

ಚಾಲಕರು ಪ್ರತಿ ದಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿ ನಂತರ ಹೃದಯ ರೋಗ ಉಂಟಾಗುತ್ತಿದೆ. ತಂಬಾಕು, ಸಿಗರೇಟ್ ನಿಷೇಧಿಸಿದರೆ ಮಾತ್ರ ಶೇ.50ರಷ್ಟು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗಲಿವೆ.

-ರಾಹುಲ್ ಪಾಟೀಲ್, ಪ್ರಾಧ್ಯಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News