ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ, ನುಡಿದಂತೆಯೇ ನಡೆದಿದ್ದೇನೆ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-09-27 17:34 GMT

ಬೆಂಗಳೂರು, ಸೆ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಧಾನಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನುಡಿದಂತೆಯೇ ನಿರ್ವಹಿಸಿದ್ದೇನೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹರ್ಷ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ‘ಮೇಯರ್ ಒಂದು ವರ್ಷದ ಸಾಧನೆ ಜನತೆ ಜೊತೆ ವರ್ಷ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 8-10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಘನತ್ಯಾಜ್ಯ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ, ಪ್ಲಾಸ್ಟಿಕ್ ಉತ್ಪನ್ನಗಳ ಸಂಪೂರ್ಣ ನಿಷೇಧಕ್ಕೆ ಕ್ರಮ, ಪಿಂಕ್ ಬೇಬಿ ಯೋಜನೆ, ಅಡಮಾನ ಇಟ್ಟಿದ್ದ ಕಟ್ಟಡಗಳನ್ನು ಋಣಮುಕ್ತ ಮಾಡಿರುವುದು, ಹಸಿರು ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ ಸೇರಿದಂತೆ ಒಂದು ಒಂದು ವರ್ಷದೊಳಗೆ ಹತ್ತು ಹಲವು ಯೋಜನೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.

ನಗರದಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ಮಾರಾಟಗಾರರ ಮಳಿಗೆಯ ಮೇಲೆ ದಾಳಿ ನಡೆಸಿ, ಜಫ್ತಿ ಮಾಡಿದ್ದಲ್ಲದೆ ದಂಡವನ್ನು ವಿಧಿಸಲಾಯಿತು. ಕೆರೆ ಅಭಿವೃದ್ಧಿ ನಿರ್ವಹಣೆ, ಘನತ್ಯಾಜ್ಯ ಸಾರ್ವಜನಿಕ ಕಾಮಗಾರಿಗಳು, ಯೋಜನೆಗಳು, ರಸ್ತೆ ವಿಭಾಗ ರಾಜಕಾಲುವೆ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಮೊದಲ ಬಾರಿಗೆ ಎಸ್ಕ್ರೋ ಖಾತೆಯಲ್ಲಿ 1,382 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಹಸಿರು ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ 75 ಸಾವಿರ ಸಸಿಗಳನ್ನು ನೆಡುವ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸಸಿಗಳ ನಿರ್ವಹಣೆಗೆ ಪಾಲಿಕೆ ಆಯವ್ಯಯದಲ್ಲಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ರೈಲ್ವೆ ಕೆಳಸೇತುವೆಗಳ ಬಳಿ ತ್ಯಾಜ್ಯ ನೀರು ಸುರಿಯದಂತೆ ತಡೆಗಟ್ಟಲು ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿದ್ದು, ಎಲ್ಲಾ ಕೆಳಸೇತುವೆಗಳ ಬಳಿ ಸೀಟ್‌ಗಳನ್ನು ಅಳವಡಿಸಲಾಗಿದೆ ಎಂದರು.

ಹೆಣ್ಣು ಸಂತಾನವನ್ನು ಪ್ರೋತ್ಸಾಹಿಸಲು 24 ಆಸ್ಪತ್ರೆಗಳಲ್ಲಿ ಜನಿಸಿದ ಮೊದಲ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕೆ ಬಜೆಟ್‌ನಲ್ಲಿ 1.20 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು ಅಲ್ಪ ತೃಪ್ತಿ ತಂದಿದೆ. ಡಾ.ಶಿವಕುಮಾರ ಹೆಸರಿನಲ್ಲಿ 5 ಶಿಕ್ಷಣ ಸಂಸ್ಥೆಗಳಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನಿಗದಿ ಮಾಡಲಾಯಿತು. 22 ಮೇಲುತ್ಸೇವೆ, ಕೆಳಸೇತುವೆಗಳ ದುರಸ್ತಿ ಮಾಡಲಾಗಿದೆ. ನಗರದಲ್ಲಿರುವ ಗುಜರಿ ವಾಹನಗಳನ್ನು ಬಿಂಗೀಪುರ ಭೂಭರ್ತಿ ಜಾಗಕ್ಕೆ ಸ್ಥಳಾಂತರಗೊಳಿಸಲಾಯಿತು ಎಂದು ತಿಳಿಸಿದರು.

ಸಾಧ್ಯವಾಗಲಿಲ್ಲ

ಲೋಕಸಭೆ ಚುನಾವಣೆ, ಸರಕಾರ ರಚನೆಯ ಗೊಂದಲ ಹಾಗೂ ಪಾಲಿಕೆ ಮಂಡಿಸಿದ ಬಜೆಟ್ ತಕ್ಷಣ ಅನುಮೋದನೆಯಾಗದ ಪರಿಣಾಮ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಉದ್ಯಾನವನಗಳು, ಶಾಲೆಗಳನ್ನು ನಿರೀಕ್ಷೆಯಂತೆ ಉನ್ನತೀಕರಿಸಲು ಸಾಧ್ಯವಾಗಲಿಲ್ಲ. ಇನ್ನು, ಸಮಯದ ಅಭಾವ ಮತ್ತು ಸರಕಾರ ಬಜೆಟ್ ತಡೆಹಿಡಿದ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕಸದ ಟೆಂಡರ್ ಪ್ರಕ್ರಿಯೆಯು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಾಖಲೆಯ ಆಸ್ತಿ ತೆರಿಗೆ ಸಂಗ್ರಹ

ಬಿಬಿಎಂಬಿ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಯಿತು. 2013-14ನೇ ಸಾಲಿನಲ್ಲಿ 1,287 ಕೋಟಿ ರೂ. ಸಂಗ್ರಹವಾಗಿತ್ತು. 2017-18ನೇ ಸಾಲಿನಲ್ಲಿ 2,197 ಕೋಟಿ ಸಂಗ್ರಹಿಸಲಾಗಿತ್ತು. 2018-19ರ ನನ್ನ ಅವಧಿಯಲ್ಲಿ ಸೆ.15ರವರೆಗೆ 2,565 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ದಾಖಲೆ ಸೃಷ್ಟಿಸಲಾಯಿತು. ಕೇವಲ ನೂರು ದಿನಗಳ ಅವಧಿಯಲ್ಲಿ 1,780 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಲಾಯಿತು ಎಂದು ತಿಳಿಸಿದರು.

ಬಿ ಖಾತಾದಿಂದ ಎ ಖಾತಾಗೆ ನಿವೇಶನಗಳನ್ನು ಪರಿವರ್ತನೆ ಮಾಡಲು ಸಾಧ್ಯವಾಗಲಿಲ್ಲ. ಸರಕಾರದ ಗಮನಕ್ಕೆ ತಂದು ತ್ವರಿತವಾಗಿ ಜಾರಿಗೊಳಿಸಲು ಸಮಿತಿ ರಚಿಸಲಾಗಿದ್ದರೂ ಅನುಷ್ಠಾನಗೊಳ್ಳದೆ ಹಾಗೆಯೇ ಉಳಿದು ಹೋಯಿತು. ಖಾತಾ ಬದಲಾವಣೆಯಾಗಿದ್ದರೆ ಪಾಲಿಕೆಗೆ 3 ಸಾವಿರದಿಂದ 4 ಸಾವಿರ ಕೋಟಿ ರೂ. ಆದಾಯ ಬರುತಿತ್ತು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News