ಭಾರತದ ಚುನಾವಣೆ ವೇಳೆ ವಾಟ್ಸ್ ಆ್ಯಪ್ ದುರ್ಬಳಕೆ: ಅಧ್ಯಯನದಿಂದ ಬಹಿರಂಗ

Update: 2019-09-28 05:46 GMT

ಹೊಸದಿಲ್ಲಿ: ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ವಾಟ್ಸ್ ಆ್ಯಪ್, ಯಾವುದೇ ಸಂದೇಶ ಫಾರ್ವರ್ಡ್ ಮಾಡುವುದನ್ನು ಐದು ಮಂದಿಗೆ ಸೀಮಿತಗೊಳಿಸಿದ್ದರೂ, ಕಳೆದ ಸಾರ್ವತ್ರಿಕ ಚುನಾವಣೆಯಯ ವೇಳೆ ತಪ್ಪು ಮಾಹಿತಿಗಳನ್ನು ಹರಡಲು ಈ ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ ಎಂಬ ಅಂಶ ಬ್ರೆಜಿಲ್ ವಿವಿ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಫೇಸ್‍ಬುಕ್ ಮಾಲಕತ್ವದ ವಾಟ್ಸ್ ಆ್ಯಪ್, ಚುನಾವಣಾ ಪ್ರಚಾರ ಸಂದರ್ಭದಲ್ಲಿ ವಾಟ್ಸ್ ಆ್ಯಪ್ ಗುಂಪುಗಳಿಗೆ ಇಂಥ ಸುಳ್ಳು ಮಾಹಿತಿಗಳ ಅಪಪ್ರಚಾರವನ್ನು ತಡೆಯಲು ವಿಫಲವಾಗಿದೆ. ಬ್ರೆಜಿಲ್‍ನ ಫೆಡರಲ್ ಯುನಿವರ್ಸಿಟಿ ಆಫ್ ಮಿನಾಸ್ ಗೆರಿಯಾಸ್ ಹಾಗೂ ಅಮೆರಿಕದ ಮೆಸೆಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಜಂಟಿಯಾಗಿ ಈ ಅಧ್ಯಯನ ಕೈಗೊಂಡಿದ್ದವು.

ತಪ್ಪುಸಂದೇಶ ರವಾನಿಸಲು ಪ್ಲಾಟ್‍ಫಾರಂ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ವಾಟ್ಸ್ ಆ್ಯಪ್ ಕೈಗೊಂಡ ಕ್ರಮಗಳು ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಈ ಅಧ್ಯಯನ ಕೈಗೊಳ್ಳಲಾಗಿತ್ತು. ಭಾರತ, ಬ್ರೆಜಿಲ್ ಮತ್ತು ಇಂಡೋನೇಷ್ಯಾದಲ್ಲಿ ಚುನಾವಣೆಗೆ 60 ದಿನ ಮೊದಲು ಮತ್ತು ಚುನಾವಣೆ ಬಳಿಕ 15 ದಿನಗಳ ಕಾಲದ ದತ್ತಾಂಶಗಳನ್ನು ವಿಶ್ಲೇಷಿಸಿದ ಈ ನಿರ್ಧಾರಕ್ಕೆ ಬರಲಾಗಿದೆ.

ವಾಟ್ಸ್ ಆ್ಯಪ್ನ ಪ್ರಯತ್ನಗಳು ಸುಳ್ಳು ಸುದ್ದಿ ಹರಡುವುದನ್ನು ವಿಳಂಬ ಮಾಡಲು ಫಲಕಾರಿಯಾಗಿದೆಯೇ ವಿನಃ ಅದನ್ನು ತಡೆಯುವಲ್ಲಿ ಯಾವುದೇ ಫಲ ನೀಡಿಲ್ಲ ಎಂದು arxiv.org ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾದ ಅಧ್ಯಯನ ವರದಿ ಪ್ರತಿಪಾದಿಸಿದೆ.

ಬ್ರೆಜಿಲ್‍ನಲ್ಲಿ ವಿವಿಧ ವಾಟ್ಸ್ ಆ್ಯಪ್ ಗುಂಪುಗಳ ಮೂಲಕ ಸುಳ್ಳು ಸುದ್ದಿ ಪ್ರಚಾರವಾಗಲು ಎರಡು ದಿನ ತೆಗೆದುಕೊಂಡರೆ, ಭಾರತದಲ್ಲಿ ಮೊದಲ ಬಾರಿಗೆ ಪೋಸ್ಟ್ ಆದ 20 ದಿನಗಳ ಬಳಿಕವೂ ಇದು ವಿವಿಧ ಗುಂಪುಗಳಲ್ಲಿ ಹರಿದಾಡುತ್ತಿತ್ತು ಎನ್ನುವುದನ್ನು ವರದಿ ಹೇಳಿದೆ. ಈ ಗುಂಪುಗಳ ಮೂಲಕ ಪ್ರಸಾರವಾದ ಸಂದೇಶಗಳು ವೈಯಕ್ತಿಕವಾಗಿಯೂ ಕೊನೆಗೆ ಬಳಕೆದಾರರಿಗೆ ರವಾನೆಯಾಗಿವೆ ಎಂದು ವರದಿ ಸ್ಪಷ್ಟಪಡಿಸಿದೆ.

ಏಪ್ರಿಲ್ 11ರಿಂದ ಮೇ 19ರ ವರೆಗೆ ಭಾರತದಲ್ಲಿ ನಡೆದ ಏಳು ಹಂತಗಳ ಚುನಾವಣೆ ವೇಳೆ, ಸುಳ್ಳು ಸುದ್ದಿಗಳು ತನ್ನ ಪ್ಲಾಟ್‍ಫಾರಂ ಮೂಲಕ ಹರಿದಾಡುವುದನ್ನು ತಡೆಯಲು ವಾಟ್ಸ್ ಆ್ಯಪ್ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News