ಬಾಕಿ ವೇತನ ಕೇಳಿದ ಬುಡಕಟ್ಟು ಮಹಿಳೆಯ ಮೇಲೆ ಮೂರು ದಿನ ಸಾಮೂಹಿಕ ಅತ್ಯಾಚಾರ !

Update: 2019-09-29 18:07 GMT

ಹೈದರಾಬಾದ್, ಸೆ. 29: ಬಾಕಿ ವೇತನ ಕೇಳಿದ್ದಕ್ಕಾಗಿ ತೆಲಂಗಾಣದ ಬುಡಕಟ್ಟು ಸಮುದಾಯದ 30 ವರ್ಷದ ಮಹಿಳೆಯ ಮೇಲೆ ಆಕೆಯ ಉದ್ಯೋಗದಾತ ಹಾಗೂ ಆತನ ಗೆಳೆಯ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಈ ಸಂದರ್ಭ ಮಹಿಳೆಯ ಪತಿಯನ್ನು ಸಮೀಪದ ಕೊಠಡಿಯಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

 ಸೆಪ್ಟಂಬರ್ 18ರ ರಾತ್ರಿಯಿಂದ ಸೆಪ್ಟಂಬರ್ 21ರ ವರೆಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಮಹಿಳೆ ಹಾಗೂ ಆಕೆಯ ಪತಿ ನಾಗರಕುರ್ನೂಲ್‌ನಿಂದ ಆಗಮಿಸಿದ ವಲಸೆ ಕಾರ್ಮಿಕರು. ಅವರು ಇಲ್ಲಿನ ಪ್ರಸಾದ್ ರೆಡ್ಡಿಯ ಕೋಳಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟು 15 ಸಾವಿರ ರೂಪಾಯಿ ವೇತನಕ್ಕೆ ದಂಪತಿಯನ್ನು ರೆಡ್ಡಿ ಮೇಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದ. ದಂಪತಿಗೆ ಕೇವಲ ಎರಡು ತಿಂಗಳ ವೇತನ ಮಾತ್ರ ನೀಡಲಾಗಿತ್ತು. ಆಗಸ್ಟ್ ಹಾಗೂ ಸೆಪ್ಟಂಬರ್‌ನ ವೇತನ ಪಾವತಿಸಿರಲಿಲ್ಲ. ಸೆಪ್ಟಂಬರ್ ಎರಡನೇ ವಾರದಲ್ಲಿ ದಂಪತಿ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದರು. ಸೆಪ್ಟಂಬರ್ 18ರಂದು ರಾತ್ರಿ ಪ್ರಸಾದ್ ರೆಡ್ಡಿ ಗೆಳೆಯನ ಕೋಳಿ ಫಾರ್ಮ್‌ನಲ್ಲಿ ತುರ್ತು ಕೆಲಸ ಇರುವುದರಿಂದ ತನಗೆ ನೆರವು ನೀಡುವಂತೆ ಮನವಿ ಮಾಡಿದ್ದ.

ದಂಪತಿಯನ್ನು ಕಾರಿನಲ್ಲಿ ಕರೆದೊಯ್ದ ಇಬ್ಬರನ್ನೂ ಬೇರೆ ಬೇರೆ ರೂಮಿನಲ್ಲಿ ಕೂಡಿ ಹಾಕಿದ್ದ. ಅನಂತರ ಪ್ರಸಾದ್ ಇತರ ಮೂವರು ವ್ಯಕ್ತಿಗಳೊಂದಿಗೆ ಮಹಿಳೆಯ ಮೇಲೆ 3 ದಿನಗಳ ಕಾಲ ಅತ್ಯಾಚಾರ ಎಸಗಿದ್ದ. ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ದಂಪತಿ ಸೆಪ್ಟಂಬರ್ 26ರಂದು ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಬರುವ ಪಹಾಡಿ ಶರೀಫ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News