ಗುಜರಾತ್ ಉಪಚುನಾವಣೆ: ಮಾಜಿ ಕಾಂಗ್ರೆಸಿಗರಿಗೆ ಬಿಜೆಪಿ ಮಣೆ

Update: 2019-09-30 03:37 GMT
ಅಲ್ಪೇಶ್ ಠಾಕೂರ್

ಅಹ್ಮದಾಬಾದ್: ಕಾಂಗ್ರೆಸ್‌ನ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಅವರನ್ನು ಬಿಜೆಪಿ ರಾಧನ್‌ಪುರ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.

ಮತ್ತೊಬ್ಬ ಮಾಜಿ ಕಾಂಗ್ರೆಸ್ ಶಾಸಕ ದವಲ್ ಸಿಂಗ್ ಝಾಲಾ ಅವರಿಗೆ ಬಯಾದ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಮುನ್ನ ಠಾಕೂರ್ ಹಾಗೂ ಝಾಲಾ ಜುಲೈ 5ರಂದು ಕಾಂಗ್ರೆಸ್ ಪಕ್ಷ ತೊರೆದಿದ್ದರು. ರಾಜ್ಯಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ ಅದೇ ತಿಂಗಳು ಬಿಜೆಪಿ ಸೇರಿದ್ದರು.

ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಗುಜರಾತ್‌ನ ಆರು ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. 13 ರಾಜ್ಯಗಳ 32 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಠಾಕೂರ್, ಲೋಕಸಭಾ ಚುನಾವಣೆಗೆ ಮುನ್ನ ಪಕ್ಷ ತೊರೆದಿದ್ದರು.

ಗುಜರಾತ್‌ನ ಪಠಾಣ್ ಜಿಲ್ಲೆಯ ರಾಧನ್‌ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರಭಾವಿ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್, "ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷಿಸಲಾಗಿದೆ ಹಾಗೂ ಅವಮಾನಿಸಲಾಗಿದೆ" ಎಂದು ಹೇಳಿಕೆ ನೀಡಿದ್ದರು. ಠಾಕೂರ್ ಅವರ ಉಮೇದುವಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಂಡಿದ್ದ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಅಂತಿಮಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅ. 21ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ನಾಲ್ವರು ಅಭ್ಯರ್ಥಿಗಳ ಹೆಸರು ಅಂತಿಮಪಡಿಸಿದೆ. ಥರಾಡ್ ಕ್ಷೇತ್ರದಿಂದ ಗುಲಾಬ್‌ಸಿನ್ಹ ಪಿರಾಭಾಯ್, ಬಯಾದ್ ಕ್ಷೇತ್ರದಿಂದ ಪಟೇಲ್ ಜಸುಭಾಯ್ ಶಿವಭಾಯ್, ಅಮ್ರೈವಾಡಿ ಕ್ಷೇತ್ರದಿಂದ ಧರ್ಮೇಂಧ್ರಭಾಯ್ ಶಾಂತಿಲಾಲ್‌ಪಟೇಲ್ ಮತ್ತು ಲೂನಾವಾಡದಿಂದ ಚೌಹಾಣ್ ಗುಲಾಬ್‌ಸಿನ್ಹ ಸೋಮ್‌ಸಿನ್ಹ ಅವರನ್ನು ಕಣಕ್ಕೆ ಇಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News