ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವ್ಲಾಖಾರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಗೊಗೊಯಿ

Update: 2019-09-30 17:55 GMT

ಹೊಸದಿಲ್ಲಿ, ಸೆ. 30: ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧದ ಪ್ರಥಮ ಮಾಹಿತಿ ವರದಿ ರದ್ದುಗೊಳಿಸುವಂತೆ ಕೋರಿ ನಾಗರಿಕ ಹಕ್ಕು ಹೋರಾಟಗಾರ ಗೌತಮ್ ನವ್ಲಾಖ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಸೋಮವಾರ ನಿರಾಕರಿಸಿದ್ದಾರೆ.

ಗೌತಮ್ ನವ್ಲಾಖ ತನ್ನ ವಿರುದ್ಧ ಪುಣೆ ಪೊಲೀಸರು ದಾಖಲಿಸಿದ್ದ ಪ್ರಥಮ ಮಾಹಿತಿ ವರದಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಈ ತೀರ್ಪು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.

ಈ ಮನವಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಹಾಗೂ ಎಸ್. ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಪೀಠದ ಸೋಮವಾರ ವಿಚಾರಣೆಗೆ ಬಂತು. ಈ ಸಂದರ್ಭ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ತಾನು ಒಳಗೊಳ್ಳದ ಪೀಠಕ್ಕೆ ಮನವಿಯ ವಿಚಾರಣೆ ವಹಿಸುವಂತೆ ನಿರ್ದೇಶಿಸಿದರು.

ನವ್ಲಾಖ ವಿರುದ್ಧ ತನಿಖೆ ಮುಂದುವರಿಸಲು ಸಾಕಷ್ಟು ಸಾಕ್ಷ್ಯಗಳು ಇವೆ ಎಂಬ ಮೇಲ್ನೋಟದ ತೀರ್ಮಾನಕ್ಕೆ ಬಾಂಬೆ ಉಚ್ಚ ನ್ಯಾಯಾಲಯ ಬಂದಿತ್ತು. ಸಿಪಿಐ (ಮಾವೋವಾದಿ) ಸದಸ್ಯರ ನಡುವೆ ವಿನಿಯಮವಾದ ಪತ್ರಗಳು, ಗೌತಮ್ ನವ್ಲಾಖ ಸಿಪಿಐ (ಮಾವೋವಾದಿ) ಯೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ ಎಂದು ಹೇಳುವ ಸಿಪಿಐ (ಮಾವೋವಾದಿ) ಸದಸ್ಯನೋರ್ವ ನವ್ಲಾಖ ಕುರಿತು ಬರೆದ ವರದಿ ಸಹಿತ ಹಲವು ಸಾಕ್ಷಗಳನ್ನು ಪುಣೆ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅಲ್ಲದೆ, ಪೊಲೀಸರು ಹೆಚ್ಚುವರಿ ದಾಖಲೆಯಾಗಿ ಮುಚ್ಚಿದ ಲಕೋಟೆಯಲ್ಲಿ ‘ಸ್ಟ್ರ್ಯಾಟಜಿ ಆ್ಯಂಡ್ ಟ್ಯಾಕ್ಟಿಸ್ ಆಫ್ ಇಂಡಿಯನ್ ರೆವೆಲ್ಯೂಷನ್’ ಪುಸ್ತಕದ ಪ್ರತಿಯನ್ನು ಕೂಡ ಸಲ್ಲಿಸಿದ್ದರು.

 ಆದರೆ, ತನ್ನ ಆದೇಶದ ಅವಲೋಕನಗಳು ಕೇವಲ ಮೇಲ್ನೋಟದ್ದು. ಆದುದರಿಂದ ಇದು ವಿಚಾರಣಾ ನ್ಯಾಯಾಲಯದ ಮೇಲೆ ತೀರ್ಪಿನ ಮೇಲೆ ಪ್ರಭಾವ ಬೀರಬಾರದು ಎಂದು ಉಚ್ಚ ನ್ಯಾಯಾಲಯ ಒತ್ತಿ ಹೇಳಿತ್ತು. ಇದರೊಂದಿಗೆ ಸುಪ್ರೀಂ ಕೋರ್ಟ್‌ನ ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ನವ್ಲಾಖ ಅವರ ನಿರೀಕ್ಷಣಾ ಜಾಮೀನನನ್ನು ಮೂರು ವಾರಗಳ ಕಾಲ ವಿಸ್ತರಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಸೆಪ್ಟಂಬರ್ 16ರಂದು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News