ನಾವು ‘ಅವರ’ ಪರವಾಗಿದ್ದೇವೆ: ಅನರ್ಹ ಶಾಸಕರಿಗೆ ಸಚಿವ ಆರ್.ಅಶೋಕ್ ಅಭಯ

Update: 2019-09-30 12:52 GMT

ಬೆಂಗಳೂರು, ಸೆ. 30: ನಾವು ‘ಅವರ’ ಪರ ಇದ್ದೇವೆ, ‘ಅವರಿಗೆ’ ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅನರ್ಹ ಶಾಸಕರ ಹೆಸರು ಪ್ರಸ್ತಾಪಿಸದೆ ಅನರ್ಹ ವಿಚಾರದಲ್ಲಿನ ವ್ಯಾಖ್ಯಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರದಲ್ಲಿ ಪಕ್ಷದಲ್ಲೆ ನಾನಾ ವ್ಯಾಖ್ಯಾನಗಳು ಕೇಳಿ ಬರುತ್ತಿರುವುದು ಸತ್ಯ. ಅವರು ಬಿಜೆಪಿ ಸೇರ್ಪಡೆಯಾದರೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವುದು ನಿಶ್ಚಿತ ಎಂದರು.

ಬಿಎಸ್‌ವೈ ಜತೆ ನಾವಿದ್ದೇವೆ: ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆ ನಾವಿದ್ದೇವೆ. ಅವರು ಮೂರೂವರೆ ವರ್ಷ ಸಿಎಂ ಆಗಿ ಆಡಳಿತ ನಡೆಸಲಿದ್ದಾರೆಂದ ಅಶೋಕ್, ಪಕ್ಷದಲ್ಲಿ ಸಮನ್ವಯತೆ ಕೊರತೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.

ಸಂಸದ ಡಿ.ಕೆ.ಸುರೇಶ್ ಅವರಿಗೆ ಈಡಿ ನೋಟಿಸ್ ಜಾರಿಗೂ ನಮಗೂ ಸಂಬಂಧ ಇಲ್ಲ. ಈಡಿ ಕಾನೂನಿನ ಅನ್ವಯ ನಡೆದುಕೊಳ್ಳುತಿದೆ. ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಬೇಕು. ತಪ್ಪು ಮಾಡಿಲ್ಲ ಎಂದರೆ ಹೊರಗೆ ಬರುತ್ತಾರೆ ಎಂದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಅಶೋಕ್ ನುಡಿದರು.

ಸತ್ಯ ಗೊತ್ತಾಗಲಿದೆ: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೆ ಸತ್ಯಾಂಶ ಹೊರಬರಲಿದೆ. ಆದಿಚುಂಚನಗಿರಿ ಸ್ವಾಮಿ ಫೋನ್ ಕದ್ಧಾಲಿಕೆ ಯಾವುದೇ ಸರಕಾರ ಮಾಡಿದ್ದರೂ ಅದು ಪಾಪದ ಕೆಲಸ ಎಂದ ಅಶೋಕ್, ಸ್ವಾಮೀಜಿಗೆ ನೋವಾಗಿದೆ ಎಂದು ಕ್ಷಮೆ ಕೋರಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News