ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ: ಕೇರಳ ಪ್ರಥಮ, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ

Update: 2019-09-30 14:37 GMT
ಫೋಟೊ: Reuters

ಹೊಸದಿಲ್ಲಿ, ಸೆ.30: ಶಾಲಾ ಶಿಕ್ಷಣ ಗುಣಮಟ್ಟದ ಸೂಚ್ಯಂಕ ಪಟ್ಟಿ(2016-17ರ ಸಾಲಿನಲ್ಲಿ)ಯಲ್ಲಿ ಸ್ಥಾನ ಪಡೆದಿರುವ 20 ದೊಡ್ಡ ರಾಜ್ಯಗಳಲ್ಲಿ ಕೇರಳ ಅಗ್ರಸ್ಥಾನ ಪಡೆದಿದ್ದರೆ, ರಾಜಸ್ತಾನ ದ್ವಿತೀಯ ಮತ್ತು ಕರ್ನಾಟಕ ತೃತೀಯ ಸ್ಥಾನ ಗಳಿಸಿದೆ.

ಅತ್ಯಧಿಕ ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಸಮಗ್ರ ಸಾಧನೆಗಾಗಿ ಕೇರಳ ಶೇ.76.6 ಅಂಕ ಗಳಿಸಿದ್ದರೆ ಅಂತಿಮ ಸ್ಥಾನದಲ್ಲಿರುವ ಉತ್ತರಪ್ರದೇಶ ಶೇ. 36.4 ಅಂಕ ಗಳಿಸಿದೆ.

‘ನಮ್ಮ ಶಾಲೆಯ ಯಶಸ್ಸು- ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ’ (ಎಸ್‌ಇಕ್ಯುಐ)ಎಂಬ ಶೀರ್ಷಿಕೆಯ ವರದಿಯನ್ನು ನೀತಿ ಆಯೋಗ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ವಿಶ್ವಬ್ಯಾಂಕ್ ಜಂಟಿಯಾಗಿ ಬಿಡುಗಡೆಗೊಳಿಸಿದೆ. ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಆಧಾರದಲ್ಲಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.

2015-16 ಅನ್ನು ಮೂಲವರ್ಷ ಹಾಗೂ 2016-17ಅನ್ನು ಉಲ್ಲೇಖ ವರ್ಷ ಎಂದು ಪರಿಗಣಿಸಿ , ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಧನೆಯನ್ನು ವಿಶ್ಲೇಷಿಸಿ ಸೂಚ್ಯಂಕವನ್ನು ರೂಪಿಸಲಾಗಿದೆ. ಒಟ್ಟು 30 ಸೂಚಕದ ಆಧಾರದಲ್ಲಿ ಸೂಚ್ಯಂಕ ತಯಾರಿಸಲಾಗಿದೆ. ತಮ್ಮ ಶಕ್ತಿ ಮತ್ತು ದೌರ್ಬಲ್ಯವನ್ನು ಗುರುತಿಸಿ, ಪಠ್ಯಕ್ರಮದಲ್ಲಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯನೀತಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ ಎಂದು ವರದಿ ಬಿಡುಗಡೆಗೊಳಿಸಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

ಈಗ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು ಕಲಿಕೆಯ ಫಲಿತಾಂಶವು ಶಾಲಾ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಭವಿಷ್ಯದ ಪೀಳಿಗೆಯನ್ನು ಸವಾಲಿಗೆ ಸಿದ್ಧಗೊಳಿಸಲು ಶಾಲಾ ಶಿಕ್ಷಣ ವೇದಿಕೆಯಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

20 ದೊಡ್ಡ ರಾಜ್ಯಗಳ ಪೈಕಿ 18 ರಾಜ್ಯಗಳು 2015-16 ಮತ್ತು 2016-17ರ ಮಧ್ಯೆ ತಮ್ಮ ಸಮಗ್ರ ಸಾಧನೆಯ ಅಂಕವನ್ನು ಉತ್ತಮಪಡಿಸಿಕೊಂಡಿವೆ. ಇದರಲ್ಲಿ ಹರ್ಯಾಣ, ಅಸ್ಸಾಂ, ಉತ್ತರಪ್ರದೇಶ, ಒಡಿಶಾ ಮತ್ತು ಗುಜರಾತ್ ಅಧಿಕ ಸುಧಾರಣೆ ದಾಖಲಿಸಿದ್ದು ಅನುಕ್ರಮವಾಗಿ ಶೇ.18.5, ಶೇ.16.8, ಶೇ.13.7, ಶೇ.12.4 ಮತ್ತು ಶೇ.10.4 ಅಂಕಗಳಷ್ಟು ಉತ್ತಮಪಡಿಸಿಕೊಂಡಿವೆ . ಸಣ್ಣ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿರುವ ಮಣಿಪುರ ಶೇ.68.2 ಅಂಕ ಗಳಿಸಿದ್ದರೆ ಕಡೆಯ ಸ್ಥಾನದಲ್ಲಿರುವ ಅರುಣಾಚಲ ಪ್ರದೇಶ ಶೇ.24.6 ಅಂಕ ದಾಖಲಿಸಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಗ್ರಸ್ಥಾನದಲ್ಲಿರುವ ಚಂಡೀಗಢ ಶೇ.82.9 , ಕಡೆಯ ಸ್ಥಾನದಲ್ಲಿರುವ ಲಕ್ಷದ್ವೀಪ ಶೇ.31.9 ಅಂಕ ದಾಖಲಿಸಿದೆ.

ಕಲಿಕೆಯ ಫಲಿತಾಂಶವನ್ನು ಸುಧಾರಿಸುವ ಸವಾಲಿನ ಮಧ್ಯೆಯೇ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಣದ ಲಭ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ಹಾಗೂ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಎಂದು ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಪದ್ಧತಿಯನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಸೂಚ್ಯಂಕ ಸಹಾಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಸಣ್ಣ ರಾಜ್ಯಗಳಲ್ಲಿ ಮಣಿಪುರ ಪ್ರಥಮ

8 ಸಣ್ಣ ರಾಜ್ಯಗಳಲ್ಲಿ ಮಣಿಪುರ ಪ್ರಥಮ ಸ್ಥಾನದಲ್ಲಿದ್ದರೆ ತ್ರಿಪುರ, ಗೋವಾ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದೆ. ಮಿರೆರಾಂ, ನಾಗಾಲ್ಯಾಂಡ್, ಸಿಕ್ಕಿಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶ ಆ ಬಳಿಕದ ಸ್ಥಾನದಲ್ಲಿವೆ.

7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ ಪ್ರಥಮ, ದಾದ್ರ ಮತ್ತು ನಗರ ಹವೇಲಿ ದ್ವಿತೀಯ, ದಿಲ್ಲಿ, ಪುದುಚೇರಿ,ಡಿಯು ಮತ್ತು ಡಾಮನ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಆ ಬಳಿಕದ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News