ಮುಂದಿದೆ ನಿಮಗೆ ಉಪಚುನಾವಣೆ ಮಾರಿಹಬ್ಬ: ಎಸ್.ಟಿ.ಸೋಮಶೇಖರ್ ವಿರುದ್ಧ ಎಚ್.ಎಂ.ರೇವಣ್ಣ ವಾಗ್ದಾಳಿ

Update: 2019-09-30 14:39 GMT

ಬೆಂಗಳೂರು, ಸೆ. 30: ಬಸ್ ಏಜೆಂಟ್ ಆಗಿದ್ದ ಎಸ್.ಟಿ.ಸೋಮಶೇಖರ್ ಅವರನ್ನು ತಂದು ಜನನಾಯಕನನಾಗಿ ಮಾಡಿದ್ದು, ಕಾಂಗ್ರೆಸ್ ಪಕ್ಷ. ಅವರು ತಾವು ಬೆಳೆದುಬಂದ ರೀತಿಯಲ್ಲಿ ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಲೇವಡಿ ಮಾಡಿದ್ದಾರೆ.

ಸೋಮವಾರ ಬೆಂಗಳೂರು ಹೊರ ವಲಯದ ತಲಘಟ್ಟಪುರದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಸೋಮಶೇಖರ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಸೋಮಶೇಖರ್ ತಿಳಿಯಲಿ. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವ ವೇಳೆ ಎಚ್ಚರಿಕೆ ಅಗತ್ಯ ಎಂದರು.

ಅವರಿಗೆ ಶಾಸಕ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದು ಏಕೆಂದು ಸ್ಪಷ್ಟನೆ ನೀಡಲಿ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನೀಡಿದ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ತಿದ್ದ ವ್ಯಕ್ತಿ ಇದೀಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆಂದು ಟೀಕಿಸಿದರು.

ಗುಂಡೂರಾವ್ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯದಲ್ಲಿ ಪಕ್ಷವನ್ನು ಪ್ರಚಾರ ಮಾಡಿ ಅಧ್ಯಕ್ಷರಾಗಿದ್ದಾರೆಂದ ಅವರು, ಸೋಮಶೇಖರ್ ತಾವು ಬೆಳೆದು ಬಂದ ದಾರಿಯನ್ನು ಮರೆಯಬೇಡಿ ಎಂದು ಸಲಹೆ ಮಾಡಿದರು.

ಸಿದ್ದರಾಮಯ್ಯ ಸರಕಾರದಲ್ಲಿ ಅವಧಿಯಲ್ಲಿ ‘ಎಸ್‌ಬಿಎಂ’ ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನೋಡಿದ್ದೇವೆ. ಸಿದ್ದರಾಮಯ್ಯರನ್ನು ಹೊಗಳುತ್ತಿದ್ದವರ ನಾಲಿಗೆಗೆ ಇಂದು ಏನಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮೊದಲು ಸಿದ್ದರಾಮಯ್ಯರ ನಿವಾಸಕ್ಕೆ ನೀವು ಆಗಮಿಸಿದರೆ ವಿಶೇಷ ಆತಿಥ್ಯ ಸಿಗುತ್ತಿತ್ತು. ಇದೀಗ ಅವರ ವಿರುದ್ಧವೇ ಮಾತನಾಡಲು ನಾಚಿಕೆ ಆಗುವುದಿಲ್ಲವೇ? ನಿಮ್ಮ ಅಟಾಟೋಪ ಬಹಳ ದಿನ ನಡೆಯುವುದಿಲ್ಲ. ಮುಂದಿದೆ ಉಪ ಚುನಾವಣೆ ಮಾರಿ ಹಬ್ಬ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News