ದಿನೇಶ್ ಗುಂಡೂರಾವ್ ನೆಟ್ಟಗಿದ್ದಿದ್ದರೆ ಸರಕಾರ ಇರುತ್ತಿತ್ತು: ಅನರ್ಹ ಶಾಸಕ ಬಿ.ಸಿ.ಪಾಟೀಲ್

Update: 2019-09-30 14:41 GMT

ಬೆಂಗಳೂರು, ಸೆ. 30: ‘ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೆಟ್ಟಗೆ ಇದ್ದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇರುತ್ತಿತ್ತು. ನಾವು ಪಕ್ಷ ತೊರೆಯುವ ಪ್ರಮೇಯವೇ ಬರುತ್ತಿರಲಿಲ್ಲ’ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಇಂದಿಲ್ಲಿ ಆಪಾದಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುರಿತ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ನನ್ನ ಬೆಂಬಲವಿದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿರುವ ವರೆಗೂ ಕಾಂಗ್ರೆಸ್ ಪಕ್ಷದ ಸ್ಥಿತಿ ಹೀಗೆಯೇ ಇರುತ್ತದೆ ಎಂದು ಟೀಕಿಸಿದರು.

ಗುಂಡೂರಾವ್ ಪಕ್ಷದ ಅಧ್ಯಕ್ಷರಾಗುವ ಮೊದಲ ರಾಜ್ಯದಿಂದ 9 ಮಂದಿ ಸಂಸದರಿದ್ದರು. ಇದೀಗ ಆ ಸಂಖ್ಯೆ ಒಂದಕ್ಕೆ ಇಳಿದಿದೆ. ಅವರು ಅಧ್ಯಕ್ಷರಾಗಿ ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಪಾಟೀಲ್ ಲೇವಡಿ ಮಾಡಿದರು.

ಚರ್ಚಿಸಿ ತೀರ್ಮಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವೇಳೆಯೇ ನಾನು ಟೆನ್ಷನ್‌ಗೆ ಒಳಗಾಗಿಲ್ಲ. ನಾನೂ ಎಂದೂ ಟೆನ್ಷನ್‌ಗೆ ಒಳಗಾಗುವುದಿಲ್ಲ. ನಮಗೆ ಯಾವುದೇ ಆತಂಕವೂ ಆಗಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದ ಅವರು, ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

ಯು.ಬಿ.ಬಣಕಾರ್ ವಿರುದ್ಧ ಹಿಂದಿನಿಂದಲೂ ಸ್ಪರ್ಧೆ ಮಾಡಿಲ್ಲ. ಆದರೆ, ಈ ಬಾರಿ ಅಂತಹ ಸ್ಥಿತಿ ಉದ್ಬವಿಸುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದ ಪಾಟೀಲ್, ಬಿಎಸ್‌ವೈ ನಿವಾಸದಲ್ಲಿ ಹಿರೇಕೆರೂರು ಕ್ಷೇತ್ರದ ಉಪ ಚುನಾವಣೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ. ಅವರಿಂದ ನಾನು ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದ ಅವರು, ಅನರ್ಹ ಶಾಸಕರ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಯನ್ನು ನಾನು ಸ್ವಾಗತಿಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News