ಮಧ್ಯವರ್ತಿಗಳನ್ನಿಟ್ಟು ಭಾರೀ ದಂಧೆ ಆರೋಪ: ಎಸಿಬಿ ದಾಳಿ, 11 ಮಂದಿಯ ಬಂಧನ

Update: 2019-09-30 15:05 GMT

ಬೆಂಗಳೂರು, ಸೆ.30: ನಗರದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಚೇರಿಗಳಲ್ಲಿ ಕೆಲ ಸಹಾಯಕ ನಿಯಂತ್ರಕರು ಮತ್ತು ನಿರೀಕ್ಷಕರು, ಖಾಸಗಿ ಮಧ್ಯವರ್ತಿಗಳನ್ನಿಟ್ಟು ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಗಂಭೀರ ಪ್ರಕರಣವೊಂದನ್ನು ಭೇದಿಸಿದ್ದಾರೆ.

ಸೋಮವಾರ ಇಲ್ಲಿನ ವಿವಿಪುರಂನಲ್ಲಿರುವ ಕಾನೂನು ಮಾಪನ ನಿರೀಕ್ಷಕರ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ತನಿಖಾಧಿಕಾರಿಗಳು, ಖಾಸಗಿ ಮಧ್ಯವರ್ತಿಗಳ ಬಳಿ ಇದ್ದ 7.12 ಲಕ್ಷ ರೂ. ನಗದು ಪತ್ತೆ ಹಚ್ಚಿದ್ದು, ಸಿದ್ದಪ್ಪ, ಚಂದ್ರಶೇಖರ, ಯಲ್ಲಪ್ಪ, ನವೀದ್ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ. ಜತೆಗೆ, 100ಕ್ಕೂ ಅಧಿಕ ಸತ್ಯಾಪನ ಪ್ರಮಾಣ ಪತ್ರ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇ ರೀತಿ, ಬಸವೇಶ್ವರ ನಗರದ ಮೋದಿ ರಸ್ತೆಯಲ್ಲಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆ ಕಚೇರಿ ಮೇಲೂ ದಾಳಿ ನಡೆಸಿದಾಗ ಖಾಸಗಿ ಮಧ್ಯವರ್ತಿಗಳ ಬಳಿ 2.73 ಲಕ್ಷ ರೂ. ಪತ್ತೆಯಾಗಿದೆ. ಈ ಸಂಬಂಧ 11 ಮಂದಿಯನ್ನು ದಸ್ತಗಿರಿ ಮಾಡಿ, ತೂಕದ ಮಾಪನಕ್ಕೆ ಸಂಬಂಧಪಟ್ಟಂತೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಬಳಿ ಇರಬೇಕಾದ ಸತ್ಯಾಪನ ಪ್ರಮಾಣ ಪತ್ರ, ಅಳತೆ ಮತ್ತು ತೂಕಕ್ಕೆ ಸಂಬಂಧಪಟ್ಟ ಸರಕಾರಿ ವಸ್ತು, ದಾಖಲಾತಿ ಗಳು ಖಾಸಗಿ ಮಧ್ಯವರ್ತಿಗಳ ಬಳಿ ಕಂಡು ಬಂದಿದೆ ಎಂದು ಎಸಿಬಿ ತಿಳಿಸಿದೆ.

ಅದಲ್ಲದೆ, ಅಂಗಡಿಗಳಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರವೇ ಅಧಿಕಾರಿಗಳು ಸತ್ಯಾಪನ ಪ್ರಮಾಣ ಪತ್ರ ವಿತರಿಸಬೇಕು. ಆದರೆ, ಇವುಗಳನ್ನು ಖಾಸಗಿ ಮಧ್ಯವರ್ತಿಗಳ ಮೂಲಕ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ಎಸಿಬಿ ತನಿಖೆ ಮುಂದುವರೆಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News