ಹಿಂದಿನ ಸಂಚಾರ ನಿಯಮ ಉಲ್ಲಂಘನೆಗೆ ಹಳೇ ದಂಡ: ವಾಹನ ಸವಾರರ ಆಕ್ಷೇಪ

Update: 2019-09-30 15:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.30: ರಾಜ್ಯ ಸರಕಾರವು ಕೇಂದ್ರ ಸರಕಾರದ ಮೋಟರ್ ವಾಹನ ಕಾಯ್ದೆ ತಿದ್ದುಪಡಿ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಿ, ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ತಗ್ಗಿಸಿತ್ತು. ಆಗ ನಿಯಮ ಉಲ್ಲಂಘಿಸಿದವರು ಹಿಂದಿನ ದಂಡವನ್ನೇ ಕಟ್ಟಬೇಕಾಗಿರುವುದು ವಾಹನ ಸವಾರರಿಗೆ ಹೊರೆಯಾಗಿದೆ.

ದಂಡ ಪರಿಷ್ಕರಣೆಯಾದ ನಂತರ ಸಂಚಾರ ಪೊಲೀಸರಿಂದ ನೋಟಿಸ್ ಪಡೆದವರು ಸುಮಾರು 30 ಸಾವಿರಕ್ಕೂ ಅಧಿಕ ಜನರಿದ್ದಾರೆ. ಈಗ ಅವರು ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಹಾಕದಿರುವುದು, ಅತಿ ವೇಗ ಚಾಲನೆ, ಸಿಗ್ನಲ್ ಜಂಪ್, ಒನ್‌ವೇನಲ್ಲಿ ಸಂಚಾರ ಮಾಡಿ ಕ್ಯಾಮೆರಾ ಕಣ್ಣುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇಂತಹ ಸುಮಾರು 30 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರ ದಂಡದ ಮೊತ್ತ ಅಂದಾಜು 37 ಲಕ್ಷ ರೂ. ಆಗಿದೆ. ಸೆ.4ರಿಂದ ಸೆ.21ರವರೆಗೆ 1,57,036 (ಎಲ್ಲ ರೀತಿಯ) ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,18,830 ಪ್ರಕರಣಗಳಿಗೆ ಸ್ಥಳದಲ್ಲೇ ದಂಡ ಸಂಗ್ರಹಿಸಲಾಗಿದೆ.

ಸಿಸಿಟಿವಿ ಮಾತ್ರವಲ್ಲ ಆ್ಯಪ್‌ಗಳ ಮೂಲಕ, ಸ್ಥಳದಲ್ಲಿದ್ದ ಸಂಚಾರ ಪೊಲೀಸ್ ಮಾಹಿತಿ ಆಧರಿಸಿ ವಾಹನ ಸವಾರರಿಗೆ ದಂಡ ವಿಧಿಸುವ ನಿಯಮ ಚಾಲ್ತಿಯಲ್ಲಿದೆ. ಈ ಜಾರಿಯಾದ ನೋಟಿಸ್ ಪ್ರಕರಣಗಳೂ ಇದರಲ್ಲಿ ಸೇರಿವೆ. ಈ ರೀತಿಯ ಪ್ರಕರಣಗಳು ಕಳೆದ 17 ದಿನಗಳಲ್ಲಿ 37,206 ಪ್ರಕರಣಗಳು ದಾಖಲಾಗಿದ್ದು, ಅದರ ಮೊತ್ತ 37,997,000 ರೂ. ಆಗಿದೆ.

ಹೊಸ ದಂಡ ಪಾವತಿಸುತ್ತೇವೆ

ನೋಟಿಸ್ ಪಡೆದ ಕೆಲ ವಾಹನ ಸವಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಸೆ.3ರಿಂದ ಸೆ.21ರ ಅವಧಿಯಲ್ಲೇ ಇರಬಹುದು. ಆದರೆ, ನೋಟಿಸ್ ತಲುಪಿರುವುದು ಅನಂತರದ ದಿನಗಳಲ್ಲಿ. ಹೀಗಾಗಿ ತಾವು ಹೊಸ ದಂಡವನ್ನೇ ಪಾವತಿಸುತ್ತೇವೆ ಎಂದಿದ್ದಾರೆ.

ನಿಯಮ ಪಾಲನೆ

ಭಾರಿ ದಂಡಕ್ಕೆ ಆತಂಕಗೊಂಡಿರುವ ವಾಹನ ಸವಾರರು ಜಾಗೃತರಾಗುವುದರ ಜತೆಗೆ ನಿಯಮ ಪಾಲನೆಗೆ ಮುಂದಾಗಿದ್ದಾರೆ. ಸಂಚಾರ ಪೊಲೀಸರೇ ಹೇಳುವಂತೆ, ಪರಿಷ್ಕೃತ ದಂಡ ಜಾರಿ ಬಳಿಕ ನಾಲ್ಕೈದು ದಿನಗಳ ಕಾಲ ವಾಹನ ಸವಾರರು ಆಕ್ಷೇಪ ವ್ಯಕ್ತಪಡಿಸಿದರೂ, ಅನಂತರ ಬದಲಾಗಿದ್ದಾರೆ. ಹೀಗಾಗಿ ಶೇ.40-45 ಪ್ರಕರಣಗಳು ಕಡಿಮೆಯಾಗುತ್ತಿವೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News