ಐಎನ್‌ಎಕ್ಸ್ ಮಾಧ್ಯಮ ಹಗರಣ: ಚಿದಂಬರಂಗೆ ಜಾಮೀನು ನಿರಾಕರಣೆ

Update: 2019-09-30 16:03 GMT

ಹೊಸದಿಲ್ಲಿ, ಸೆ.30: ಐಎನ್‌ಎಕ್ಸ್ ಮಾಧ್ಯಮ ಹಗರಣ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಪ್ರಕರಣದಲ್ಲಿ ಸಿಬಿಐ ವಿಚಾರಣೆ ಸಂಪೂರ್ಣಗೊಳಿಸಿದ ನಂತರ ಕಳೆದ ಒಂದು ತಿಂಗಳಿಂದ ಚಿದಂಬರಂ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ತನ್ನ ವಿರುದ್ಧದ ಆರೋಪಗಳು ಗಂಭೀರವಾಗಿಲ್ಲ ಮತ್ತು ಕೇವಲ 7 ವರ್ಷಗಳವರೆಗಿನ ಶಿಕ್ಷೆಯನ್ನು ಒಳಗೊಂಡಿದೆ ಎಂದು ಚಿದಂಬರಂ ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ, ಅಪರಾಧದ ಗಂಭೀರತೆಗೂ ಶಿಕ್ಷೆಗೂ ಯಾವುದೇ ಸಂಬಂಧವಿಲ್ಲ. ಅಪರಾಧದ ಗಂಭೀರತೆಯನ್ನು ಅದು ಸಮಾಜ, ಆರ್ಥಿಕತೆ, ದೇಶದ ಆರ್ಥಿಕ ಸ್ಥಿರತೆ ಮತ್ತು ಸಮಗ್ರತೆ ಮೇಲೆ ಬೀರುವ ಪರಿಣಾಮದ ಆಧಾರದಲ್ಲಿ ಅಳೆಯಲಾಗುತ್ತದೆ ಎಂದು ತಿಳಿಸಿದೆ.

ಚಿದಂಬರಂ ಪ್ರಕರಣದ ಸಾಕ್ಷಿಯನ್ನು ತಿರುಚುವ ಯಾವ ಸಾಧ್ಯತೆಯೂ ಇಲ್ಲ. ಆದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಉಚ್ಚ ನ್ಯಾಯಾಲಯ ತಿಳಿಸಿದೆ. 2007ರಲ್ಲಿ ವಿತ್ತ ಸಚಿವರಾಗಿದ್ದ ಸಮಯದಲ್ಲಿ ಐಎನ್‌ಎಕ್ಸ್ ಮಾಧ್ಯಮಕ್ಕೆ ಬೃಹತ್ ವಿದೇಶಿ ಹೂಡಿಕೆಗೆ ಚಿದಂಬರಂ ಅವಕಾಶ ನೀಡಿದ್ದರು. ಇದಕ್ಕೆ ಬದಲಾಗಿ ಕಾರ್ತಿ ಚಿದಂಬರಂ ಅವರಿಗೆ ಕಿಕ್‌ಬ್ಯಾಕ್ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News