ಪೆಟ್ರೋಲ್ ಪಂಪ್‌ಗಳಲ್ಲಿ ಕಾರ್ಡ್ ಪಾವತಿಗಿದ್ದ ‘ಕ್ಯಾಶ್ ಬ್ಯಾಕ್’ ಸದ್ದಿಲ್ಲದೆ ಬಂದ್ !

Update: 2019-09-30 16:42 GMT

ಹೊಸದಿಲ್ಲಿ, ಸೆ. 30: ಡಿಜಿಟಲ್ ಪಾವತಿ ವ್ಯವಸ್ಥೆ ಪ್ರೋತ್ಸಾಹಿಸಲು ಸುಮಾರು ಎರಡೂವರೆ ವರ್ಷಗಳ ಹಿಂದೆ ಸರಕಾರಿ ಅಧೀನದ ತೈಲ ಸಂಸ್ಥೆಗಳು ಆರಂಭಿಸಿದ್ದ ಪೆಟ್ರೋಲ್ ಪಂಪ್‌ನಲ್ಲಿ ತೈಲ ಖರೀದಿಸುವಾಗ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಶೇ. 0.75 ಕ್ಯಾಶ್ ಬ್ಯಾಕ್ ನೀಡುವ ಯೋಜನೆ ಅ. 1ರಿಂದ ರದ್ದುಗೊಳ್ಳಲಿದೆ.

 ‘‘ಆತ್ಮೀಯ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರೇ, ಸಾರ್ವಜನಿಕ ರಂಗದ ತೈಲ ಮಾರುಕಟ್ಟೆ ಕಂಪೆನಿಗಳ ಸಲಹೆಯಂತೆ, ತೈಲ ಖರೀದಿಸುವಾಗ ಶೇ. 0.75 ಕ್ಯಾಶ್ ಬ್ಯಾಕ್ 2019 ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ರದ್ದುಗೊಳ್ಳಲಿದೆ’’ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಪಠ್ಯ ಸಂದೇಶ ರವಾನಿಸಿದೆ.

ಚಲಾವಣೆಯಲ್ಲಿದ್ದ ಶೇ. 86 ನೋಟುಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ 2016ರಲ್ಲಿ ಉಂಟಾದ ನಗದು ಬಿಕ್ಕಟ್ಟಿನ ಬಳಿಕ ತೈಲ ಖರೀದಿ ಸಂದರ್ಭ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಶೇ. 0.75 ರಿಯಾಯಿತಿ ನೀಡುವಂತೆ ಕೇಂದ್ರ ಸರಕಾರ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‌ಗೆ ಸೂಚಿಸಿತ್ತು.

   ಇದರಂತೆ ತೈಲ ಖರೀದಿಸುವಾಗ ಕ್ರೆಡಿಟ್/ಡೆಬಿಟ್ ಕಾರ್ಡ್ ಹಾಗೂ ಇ-ವಾಲೆಟ್ ಬಳಸಿದರೆ ಶೇ. 0.75 ರಿಯಾಯಿತಿ ನೀಡುವುದನ್ನು 2016 ಡಿಸೆಂಬರ್‌ನಲ್ಲಿ ತೈಲ ಕಂಪೆನಿಗಳು ಪರಿಚಯಿಸಿದ್ದವು. ಈ ರಿಯಾಯತಿ ಎರಡೂವರೆ ವರ್ಷಗಳಿಗಿಂತಲೂ ಅಧಿಕ ಕಾಲ ಮುಂದುವರಿದಿತ್ತು.

 ನಗದು ರಿಯಾಯತಿ ಅಲ್ಲದೆ, ಸಾಮಾನ್ಯವಾಗಿ ಚಿಲ್ಲರೆ ವ್ಯಾಪಾರಿಗಳು ಪಾವತಿಸುವ ವ್ಯಾಪಾರ ರಿಯಾಯತಿ ದರ (ಎಂಡಿಆರ್) ಎಂದು ಕರೆಯಲಾಗುವ ಕಾರ್ಡ್ ಪಾವತಿ ಶುಲ್ಕ ಭರಿಸುವಂತೆ ಸರಕಾರ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಕೂಡ ನಿರ್ದೇಶಿಸಿತ್ತು.

 ಅಕ್ಟೋಬರ್ 1ರಿಂದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿ ಮೇಲಿನ ರಿಯಾಯಿತಿ ರದ್ದುಗೊಳಿಸಲು ತೈಲ ಕಂಪೆನಿಗಳು ನಿರ್ಧರಿಸಿವೆ ಎಂದು ಕೈಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಡೆಬಿಟ್ ಕಾರ್ಡ್ ಹಾಗೂ ಇತರ ಮಾದರಿಯ ಪಾವತಿಯಲ್ಲಿ ರಿಯಾಯಿತಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

 ಮೂರು ತೈಲ ಕಂಪೆನಿಗಳು 1,165 ಕೋಟಿ ರೂಪಾಯಿ ಇ-ಪಾವತಿ ರಿಯಾಯಿತಿ ಹಾಗೂ ವ್ಯಾಪಾರ ರಿಯಾಯಿತಿ ದರ ಭರಿಸಲು ಬ್ಯಾಂಕ್‌ಗಳಿಗೆ 266 ಕೋಟಿ ರೂಪಾಯಿ ಪಾವತಿಸಿದೆ. ಇದು 2017-18ರಲ್ಲಿ ಒಟ್ಟು 1,431 ಕೋಟಿ ರೂಪಾಯಿ ಆಗಿದೆ. 2018-19ರಲ್ಲಿ 2,000 ಕೋಟಿ ರೂಪಾಯಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News