370ನೆ ವಿಧಿ ರದ್ದತಿ ಪ್ರಶ್ನಿಸಿದ ಅರ್ಜಿಗಳಿಗೆ ಉತ್ತರಿಸಲು ಕೇಂದ್ರಕ್ಕೆ 4 ವಾರಗಳ ಕಾಲಾವಕಾಶ ನೀಡಿದ ಸುಪ್ರೀಂ

Update: 2019-10-01 15:56 GMT

ಹೊಸದಿಲ್ಲಿ, ಅ. 1: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಮನವಿಗಳಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರಕ್ಕೆ ಐವರು ಸದಸ್ಯರ ಸಂವಿಧಾನಿಕ ಪೀಠ ಮಂಗಳವಾರ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

 ಅಲ್ಲದೆ ಮನವಿಗಳ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ.

ಸಾಂವಿಧಾನಿಕ ಪೀಠ ಆಲಿಕೆ ಆರಂಭಿಸುತ್ತಿದ್ದಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಪ್ರತಿಕ್ರಿಯೆ ದಾಖಲಿಸಲು ಹೆಚ್ಚು ಸಮಯಾವಕಾಶ ಕೋರಿದರು. ಇದಕ್ಕೆ 10 ಮಂದಿ ದೂರುದಾರರ ಪೈಕಿ ಒಬ್ಬ ದೂರುದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ರಾಜು ರಾಮಚಂದ್ರನ್, ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೆ ಸಂಸತ್ತು ಆಗಸ್ಟ್ 5ರಂದು ಅನುಮೋದನೆ ನೀಡಿರುವ ವಿಷಯವನ್ನು ಪೀಠದ ಗಮನಕ್ಕೆ ತಂದರು. ಅಲ್ಲದೆ ಅದು ಅಕ್ಟೋಬರ್ 31ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.

ಅರ್ಜಿಗಳ ವಿಚಾರಣೆಯನ್ನು ಈ ತಿಂಗಳ ಒಳಗೆ ನಡೆಸುವಂತೆ ಅಥವಾ ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವುದನ್ನು ತಡೆಯುವಂತೆ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಐವರು ಸದಸ್ಯರ ನ್ಯಾಯಪೀಠದಲ್ಲಿ ರಾಜು ರಾಮಚಂದ್ರನ್ ಮನವಿ ಮಾಡಿದರು. ಅರ್ಜಿ ಕುರಿತು ಪ್ರತಿಕ್ರಿಯಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಾಕಷ್ಟು ಸಮಯ ನೀಡಬೇಕಾಗಿದೆ. ಸರಕಾರದಿಂದ ಪ್ರತಿಕ್ರಿಯೆ ಪಡೆಯದೆ ಇಂತಹ ಪ್ರಕರಣಗಳ ವಿಚಾರಣೆ ಸಾಧ್ಯವಿಲ್ಲ ಎಂದು ಪೀಠ ಹೇಳಿತು.

ಈ ಮನವಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠ ಸೋಮವಾರ ಒಂದು ದಿನ ಮುಂದೂಡಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಮೂವರು ಸದಸ್ಯರ ನ್ಯಾಯ ಪೀಠ ಮನವಿಗಳ ವಿಚಾರಣೆಗೆ ಸಮಯ ಇಲ್ಲ ಎಂದು ಹೇಳಿತ್ತು.

ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂವಹನ ನಿರ್ಬಂಧ, ಮಕ್ಕಳನ್ನು ಕಾನೂನು ಬಾಹಿರವಾಗಿ ವಶದಲ್ಲಿ ಇರಿಸಿಕೊಂಡಿರುವುದನ್ನು ಪ್ರಶ್ನಿಸಿ ಹಾಗೂ ನಿರ್ಬಂಧದಿಂದ ಆರೋಗ್ಯ ಸೇವೆ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರ ಬಗ್ಗೆ ಮನವಿಗಳನ್ನು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News