ಅಕ್ರಮ ಬಾಂಗ್ಲಾದೇಶಿಯರನ್ನು ಗುರುತಿಸಿ ಗಡೀಪಾರುಗೊಳಿಸಲು ಉ.ಪ್ರದೇಶ ಪೊಲೀಸರಿಗೆ ಸೂಚನೆ

Update: 2019-10-01 11:05 GMT

ಲಕ್ನೋ, ಅ.1: ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡೀಪಾರುಗೊಳಿಸುವಂತೆ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಒ. ಪಿ. ಸಿಂಗ್ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಆಂತರಿಕ ಸುರಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಗತ್ಯಬಿದ್ದರೆ ರಾಜ್ಯದಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆ ನೀಡಿದ ಬೆನ್ನಿಗೇ  ಈ ಪತ್ರ ಬಂದಿದೆ.

“ರಾಜ್ಯದಲ್ಲಿ ಬಾಂಗ್ಲಾದೇಶೀಯರು ಆಕ್ರಮವಾಗಿ ವಾಸಿಸುತ್ತಿರುವುದು ಪತ್ತೆಯಾಗಿದೆ ಹಾಗೂ ಅವರಲ್ಲಿ ಹಲವರು ನಾಪತ್ತೆಯಾಗಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ'' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ಇಂತಹ ಸಂದರ್ಭದಲ್ಲಿ ಅಕ್ರಮ ಬಾಂಗ್ಲಾದೇಶೀಯರನ್ನು ಗುರುತಿಸುವ ಅಗತ್ಯವಿದೆ'' ಎಂದು ಹಿಂದಿಯಲ್ಲಿ ಬರೆಯಲಾದ ಈ ಪತ್ರದಲ್ಲಿ ತಿಳಿಸಲಾಗಿದೆ. ಪತ್ರದ ಪ್ರತಿಯನ್ನು ಡಿಜಿಪಿ ಕಚೇರಿ ಇಂದು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದೆ.

“ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶಿ ಹಾಗೂ ಇತರ ವಿದೇಶಿಯರು ಇರಬಹುದಾದಂತಹ ರೈಲ್ವೆ ನಿಲ್ದಾಣಗಳು, ಬಸ್ಸು ನಿಲ್ದಾಣಗಳು  ಹಾಗೂ ಇತರ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಲ್ಲಿನ ನಿವಾಸಿಗಳು ಇಲ್ಲಿಯ  ನಾಗರಿಕರೇ ಎಂಬುದನ್ನು ಪರಿಶೀಲಿಸಬೇಕು, ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೋ ಚಿತ್ರೀಕರಿಸಬೇಕು'' ಎಂದು ಡಿಜಿಪಿಯ ಪತ್ರ ತಿಳಿಸಿದೆ.

``ಅವರು ತಾವು ಇತರ ಜಿಲ್ಲೆ ಹಾಗೂ ರಾಜ್ಯದವರೆಂದು ಹೇಳಿದರೆ ಅದನ್ನೂ ಪರಾಮರ್ಶಿಸಬೇಕು,  ಅವರ ಗುರುತು ಪತ್ರಗಳು, ರೇಷನ್ ಕಾರ್ಡ್, ಮತದಾರರ ಗುರುತು ಪತ್ರ, ಪಾಸ್ ಪೋರ್ಟ್. ವಾಹನ ಚಾಲನಾ ಪರವಾನಗಿ ಪರಿಶೀಲಿಸಬೇಕು,'' ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News