ನಮ್ಮ ರಾಜ್ಯದ ಮೇಲೂ ಪ್ರಧಾನಿ ಅನುಕಂಪ ತೋರಿಸಲಿ: ಡಾ.ಜಿ.ಪರಮೇಶ್ವರ್

Update: 2019-10-01 14:25 GMT

ಬೆಂಗಳೂರು, ಅ.1: ಬಿಹಾರದಲ್ಲಿನ ನೆರೆ ಪರಿಸ್ಥಿತಿಗೆ ಅನುಕಂಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೂ ಅನುಕಂಪ ತೋರಲಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಇಷ್ಟು ದಿನ ಕಳೆದರೂ ಸಣ್ಣ ಪರಿಹಾರ ಮೊತ್ತವನ್ನೂ ಕೇಂದ್ರ ಸರಕಾರ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಇದುವರೆಗೂ ರಾಜ್ಯದಿಂದ ನಿಯೋಗ ಕರೆದುಕೊಂಡು ಹೋಗುವ ಧೈರ್ಯ ಮಾಡಿಲ್ಲ ಎಂದರು.

ಪ್ರಧಾನಮಂತ್ರಿ, ಕೇಂದ್ರ ಗೃಹ ಮಂತ್ರಿಗಳು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೇರೆ ರಾಜ್ಯಕ್ಕೆ ತೋರಿದ ಅನುಕಂಪ ನಮಗೂ ತೋರಿಸಿ. ಯಡಿಯೂರಪ್ಪ ಆಶಾವಾದಿ. ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹಣ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ ಎಂದು ಅವರು ಹೇಳಿದರು. ಪರಿಹಾರವಿರಲಿ ಕರ್ನಾಟಕದ ಮುಖ್ಯಮಂತ್ರಿ ಎಂಬ ಗೌರವ ಕೂಡ ಯಡಿಯೂರಪ್ಪಗೆ ಸಿಕ್ಕಿಲ್ಲ. ಇನ್ನು ರಾಜ್ಯಕ್ಕೆ ಪರಿಹಾರ ಹೇಗೆ ತರುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ಅವರ ತಂತಿ ಮೇಲೆ ನಡೆಯುತ್ತಿರುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತಿ ಮೇಲೆ ನಡೆದರೆ ಯಾವ ಕಡೆಯಲ್ಲಾದರೂ ಬೀಳಬಹುದು ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಈ ಸರಕಾರ ಯಾವ ವೇಳೆಯಲ್ಲಾದರೂ ಬೀಳಬಹುದು ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಂತಿದೆ. ಒಟ್ಟಿನಲ್ಲಿ ಸರಕಾರದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಈ ಸರಕಾರದ ಮೇಲೆ ಜನರಿಗೆ ಭರವಸೆ ಇಲ್ಲ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಪ್ರತ್ಯೇಕ ಜಿಲ್ಲೆ ಅನಿವಾರ್ಯ: ಆಡಳಿತಾತ್ಮಕ ದೃಷ್ಟಿಯಿಂದ ತುಮಕೂರು ಜಿಲ್ಲೆಯ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವುದು ಅನಿವಾರ್ಯವಿದೆ. ಆಡಳಿತಾತ್ಮಕ ದೃಷ್ಟಿಯಿಂದಲೇ ಈ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಲಾಗಿತ್ತು ಎಂದು ಅವರು ಹೇಳಿದರು.

ಇತ್ತೀಚೆಗೆ ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿಯನ್ನೂ ಸಹ ಪ್ರತ್ಯೇಕ ಜಿಲ್ಲೆಯಾಗಿಸಿ ಎಂಬ ಒತ್ತಾಯವನ್ನು ಮುಖ್ಯಮಂತ್ರಿಗೆ ಮಾಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ 11 ವಿಧಾನಸಭಾ ಕ್ಷೇತ್ರ ಹಾಗೂ 10 ತಾಲೂಕುಗಳಿವೆ. ನಾನು ಮಧುಗಿರಿಯಿಂದ ಶಾಸಕನಾಗಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಜಿಲ್ಲೆಯ ಕೂಗು ಇತ್ತು. ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದೇವೆ. ಅನೇಕ ಉಪವಿಭಾಗಾಧಿಕಾರಿಗಳ ಕಚೇರಿಗಳು ಅಲ್ಲಿವೆ. ಪ್ರತ್ಯೇಕ ಜಿಲ್ಲೆ ರಚನೆಗೆ ಜನಾಭಿಪ್ರಾಯವೂ ಇದೆ ಎಂದು ಅವರು ಹೇಳಿದರು.

ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳನ್ನು ವಿಭಜನೆ ಮಾಡುವ ವೇಳೆ ನಮ್ಮ ಜಿಲ್ಲೆಯ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಈ ಬೇಡಿಕೆ ಮುಂದಿಡಲಾಗುತ್ತಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಹೊಸದಾಗಿ ಹಲವಾರು ತಾಲೂಕುಗಳನ್ನು ರಚನೆ ಮಾಡಲಾಗಿತ್ತು. ಹೊಸ ಸರಕಾರಗಳು ಅಧಿಕಾರಕ್ಕೆ ಬಂದಾಗ ಹೊಸದಾಗಿ ತಾಲೂಕುಗಳು ಹಾಗೂ ಜಿಲ್ಲೆಗಳನ್ನು ರಚನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News