ವರ್ಗಾವಣೆ ದಂಧೆಯಿಂದ ಸಾವಿರಾರು ಕೋಟಿ ಲೂಟಿ ಮಾಡಿದ್ದೇ ಬಿಜೆಪಿಯ ಸಾಧನೆ: ಕುಮಾರಸ್ವಾಮಿ

Update: 2019-10-01 15:38 GMT

ಬೆಂಗಳೂರು, ಅ.1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಆಯುಸ್ಸು ಕೇವಲ 2 ತಿಂಗಳು ಮಾತ್ರ. ಕೇವಲ ವರ್ಗಾವಣೆ ದಂಧೆಯಿಂದ ಸಾವಿರಾರು ಕೋಟಿ ರೂ. ಲೂಟಿ ಹಾಗೂ ಅನುದಾನ ಕಡಿತ ಮಾಡಿರುವುದೇ ಬಿಜೆಪಿಯ ಈವರೆಗಿನ ಸಾಧನೆಯೆಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಮಂಗಳವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅನುದಾನ ಕಡಿತ ಮಾಡಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ರಚನೆಯಾದಾಗಿನಿಂದ ಪ್ರಾರಂಭಗೊಂಡು ಇಲ್ಲಿಯವರೆಗೂ ಅಧಿಕಾರಿಗಳ ವರ್ಗವಣೆ ದಂಧೆಯೊಂದನ್ನು ಹೊರತು ಪಡಿಸಿ ಮತ್ಯಾವ ಅಭಿವೃದ್ಧಿ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿಲ್ಲವೆಂದು ಆರೋಪಿಸಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಪಕ್ಷಪಾತ ಧೋರಣೆ ಮಿತಿಮೀರಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದ ಅನುದಾನವನ್ನು ಏಕಾಏಕಿ ಕಡಿತಗೊಳಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಶೇ.50ಕ್ಕೂ ಹೆಚ್ಚು ಹಣವನ್ನು ಕಡಿತಗೊಳಿಸಲಾಗಿದೆ. ಇದರಿಂದ ಅಭಿವೃದ್ದಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬಿಜೆಪಿ ಸರಕಾರ ತನ್ನ ಉದ್ಧಟತನವನ್ನು ಹೀಗೆಯೇ ಮುಂದುವರೆಸಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರವಾಹ ಪರಿಸ್ಥಿತಿಯಿಂದಾಗಿ ಎರಡೂವರೆ ಲಕ್ಷ ಜನರು ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರ ನೆರವಿಗೆ ಮುಂದಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾದಲ್ಲಿ ಕಾರ್ಯಕ್ರಮ ಆಯೋಜಿಸಿ ಲಕ್ಷಾಂತರ ಕೋಟಿ ರೂ.ವನ್ನು ಖರ್ಚು ಮಾಡುತ್ತಾರೆ. ಇದನ್ನು ಜನಪರ ಸರಕಾರ ಎನ್ನಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಟೆಲಿಫೋನ್ ಕದ್ದಾಲಿಕೆ ಪ್ರಕರಣ

ಸಿಬಿಐ ಅಲ್ಲ, ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಆದಿಚುಂಚನಗಿರಿ ಮಠದ ಶ್ರೀಗಳ ಆದೇಶದಂತೆಯೇ ಅಮೆರಿಕಕ್ಕೆ ಹೋಗಿದ್ದೆ. ಅದೇ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಮಾಡಲು ಹೇಗೆ ಸಾಧ್ಯ? ನನ್ನ ಮತ್ತು ಶ್ರೀಗಳ ನಡುವಿನ ಸಂಬಂಧ ಹಾಳು ಮಾಡಲು ಕುತಂತ್ರ ಮಾಡಲಾಗುತ್ತಿದೆ.

-ಎಚ್.ಕೆ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News