ಹಿಂದಿನ ಅಧಿವೇಶನದ ಭರವಸೆಗಳ ಕ್ರೋಡೀಕರಣ: ಬಸನಗೌಡ ಪಾಟೀಲ್ ಯತ್ನಾಳ್

Update: 2019-10-01 15:07 GMT

ಬೆಂಗಳೂರು, ಅ.1: 2019-20ನೇ ಸಾಲಿನ ಪ್ರಾರಂಭಿಕ ಸಭೆಯ ಸಂದರ್ಭದಲ್ಲಿ 559 ಹಾಲಿ ಭರವಸೆಗಳು ಬಾಕಿಯಿದ್ದು, ಹಿಂದಿನ ಅಧಿವೇಶನದ ಭರವಸೆಗಳನ್ನು ಕ್ರೋಡೀಕರಣಗೊಳಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದು ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ನಡೆದ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ ಪ್ರಾರಂಭಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭೆಯಿಂದ 15 ಮಂದಿ ಸದಸ್ಯರನ್ನು ಒಳಗೊಂಡಂತೆ ಈ ಸಮಿತಿಯನ್ನು ಸಭಾಧ್ಯಕ್ಷರು ರಚನೆ ಮಾಡಿದ್ದಾರೆ ಎಂದರು.

ಸದನದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ ಹಾಗೂ ಇತರೆ ವಿಷಯಗಳ ಚರ್ಚೆಯ ಸಮಯದಲ್ಲಿ ಸದಸ್ಯರು, ಸಚಿವರಿಂದ ಅವರವರ ಇಲಾಖೆಗಳ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಹೇಳಿಕೆ ನೀಡುವಂತೆ ಆಗ್ರಹಿಸುವುದು ವಾಡಿಕೆ ಎಂದು ಅವರು ಹೇಳಿದರು.

ಈ ರೀತಿ ಸದಸ್ಯರ ಒತ್ತಾಯಕ್ಕೆ ಸ್ಪಂದಿಸಿ, ಸಚಿವರು ಸದನದಲ್ಲಿ ಕಾಲಕಾಲಕ್ಕೆ ನೀಡುವ ಹೇಳಿಕೆಗಳು, ವಾಗ್ದಾನ, ಆಶ್ವಾಸನೆಗಳು ಭರವಸೆಗಳಾಗಿ ರೂಪುಗೊಳ್ಳುತ್ತವೆ. ಈ ರೀತಿಯ ಭರವಸೆಗಳನ್ನು ಒಂದು ಕಾಲಮಿತಿಯಲ್ಲಿ ಈಡೇರಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಸದನದ ಅಂಗವಾದ ಈ ಸಮಿತಿಯು ಭರವಸೆಗಳನ್ನು ವಾಸ್ತವಿಕವಾಗಿ ಅನುಷ್ಠಾನಗೊಳಿಸುವಲ್ಲಿ ಕಾರ್ಯಾಂಗದ ಮುಖಾಂತರ ಪರಿವೀಕ್ಷಿಸುವುದು ಸಮಿತಿಯ ಪ್ರಮುಖ ಕಾರ್ಯವಾಗಿದೆ. 14ನೇ ವಿಧಾನಸಭೆಯಲ್ಲಿ ಸರಕಾರಿ ಭರವಸೆಗಳ ಸಮಿತಿಯು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 12 ವರದಿಗಳನ್ನು ಸದನದಲ್ಲಿ ಮಂಡಿಸಿದೆ ಎಂದು ಅವರು ಹೇಳಿದರು.

15ನೇ ವಿಧಾನಸಭೆಯ 2018-19ನೇ ಸಾಲಿನಲ್ಲಿಯೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ಇದುವರೆಗೂ ಒಟ್ಟು 5 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದ್ದು, ಒಂದು ಬಾರಿ ಸ್ಥಳ ಪರಿವೀಕ್ಷಣೆ ನಡೆಸಿದೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಸಚಿವರು ನೀಡುವ ಭರವಸೆಗಳನ್ನು ಜಾರಿಗೊಳಿಸುವ ಗುರುತರ ಹೊಣೆಗಾರಿಕೆಯು ಸಂಬಂಧಪಟ್ಟ ಕಾರ್ಯಾಂಗದ ಹೊಣೆಯಾಗಿದೆ. ಆದುದರಿಂದ, ಸಚಿವರು ನೀಡಿದ ಭರವಸೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ಈ ಸಮಿತಿಗೆ ಎಲ್ಲರ ಅತ್ಯಮೂಲ್ಯವಾದ ಸಲಹೆಗಳ ಅವಶ್ಯಕತೆಯಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಸಮಿತಿಯ ಎಲ್ಲ 15 ಮಂದಿ ಸದಸ್ಯರು ತಪ್ಪದೇ ಸಕಾಲದಲ್ಲಿ ಸಭೆಗಳಿಗೆ ಹಾಜರಾಗಿ, ಸಕ್ರಿಯರಾಗಿ ಚರ್ಚೆಯಲ್ಲಿ ಭಾಗವಹಿಸಿದ್ದಲ್ಲಿ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಉತ್ತಮವಾದ ವರದಿಯನ್ನು ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News