ವಿವಿಧ ಅಪರಾಧ ಪ್ರಕರಣ: 229 ಮಂದಿ ಬಂಧನ, 5.17 ಕೋಟಿ ಮಾಲು ಜಪ್ತಿ

Update: 2019-10-01 16:33 GMT

ಬೆಂಗಳೂರು, ಅ.1: ಗಂಭೀರ ಅಪರಾಧ ಪ್ರಕರಣ ಸೇರಿದಂತೆ ವಿವಿಧ ಆರೋಪಿಗಳಿಗೆ ಸಂಬಂಧಪಟ್ಟಂತೆ 229 ಜನರನ್ನು ಬಂಧಿಸಿ, 5.17 ಕೋಟಿ ರೂ. ಮಾಲು ಜಪ್ತಿ ಮಾಡುವಲ್ಲಿ ನಗರದ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳವಾರ ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ದಕ್ಷಿಣ ವಿಭಾಗದ ಪೊಲೀಸರು, 229 ಮಂದಿ ಆರೋಪಿಗಳಿಂದ 8 ಕೆಜಿ 749 ಗ್ರಾಂ ಚಿನ್ನ, 25 ಕೆಜಿ ಬೆಳ್ಳಿ, 155 ದ್ವಿಚಕ್ರ ವಾಹನಗಳು, 27 ಆಟೋಗಳು, 10 ಕಾರುಗಳು, 122 ಮೊಬೈಲ್‌ಗಳು, 54 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದರು.

ಸುಬ್ರಮಣ್ಯಪುರ 50, ಗಿರಿನಗರ 43, ಬಸವನಗುಡಿ 37, ಹನುಮಂತ ನಗರ 20, ಜಯನಗರ 27, ಕೆಎಸ್ ಲೇಔಟ್ 24. ಪುಟ್ಟೇನಹಳ್ಳಿ 21, ಪುರಂ 19, ಹೀಗೆ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಸಿದ್ದಾಪುರ ಠಾಣಾ ಪೊಲೀಸರು, ಕೆಲಸ ಮಾಡುತ್ತಿದ್ದ ಮಾಲಕರ ಮನೆಯಲ್ಲೇ ಚಿನ್ನ, ವಜ್ರ, ರೇಷ್ಮೆ ಬಟ್ಟೆಗಳನ್ನು ಕಳವು ಮಾಡಿದ್ದ ಅಪ್ರಾಪ್ತ ಬಾಲಕರನ್ನು ವಶಕ್ಕೆ ತೆಗೆದುಕೊಂಡು 6.10 ಲಕ್ಷ ಮಾಲು ಜಪ್ತಿ ಮಾಡಿದ್ದಾರೆ. ಅದೇ ರೀತಿ, ಸಿಕೆ ಅಚ್ಚುಕಟ್ಟು ಠಾಣಾ ಪೊಲೀಸರು ಬನಶಂಕರಿಯ ಇಟ್ಟಮಡುವಿನ ಬಳಿ ಮಂಜುನಾಥ ಎಂಬುವನನ್ನು ಸಿಗರೇಟ್ ಹಣದ ವಿಚಾರವಾಗಿ ಗಲಾಟೆ ತೆಗೆದು ಕೊಲೆ ಮಾಡಿದ್ದ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಹಲವು ಗಂಭೀರ ಪ್ರಕರಣಗಳೂ ಸೇರಿದಂತೆ 344 ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಿ, 229 ಮಂದಿ ಆರೋಪಿಗಳನ್ನು ಬಂಧಿಸಿರುವ ತಂಡಗಳ ಪರಿಶ್ರಮವನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ಡಾ.ರೋಹಿಣಿ ಕಟೋಚ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News