​ಶಾಸಕರ ಪತ್ನಿಯ ಪಂಚಾಯ್ತಿ ಸ್ಥಾನಕ್ಕೆ ಕುತ್ತು ತಂದ ಮಕ್ಕಳ ಸಂಖ್ಯೆ!

Update: 2019-10-02 04:00 GMT

ಭುವನೇಶ್ವರ, ಅ.2: ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ, ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ಪಂಚಾಯತ್ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ಅನರ್ಹಗೊಂಡ ಮಹಿಳೆ ಬಿಜೆಡಿ ಹಾಲಿ ಶಾಸಕ ಸಲೂಗಾ ಪ್ರಧಾನ್ ಅವರ ಪತ್ನಿ.

ಒಡಿಶಾದ ಪಂಚಾಯತ್ ಕಾಯ್ದೆಯ ಪ್ರಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಸದಸ್ಯತ್ವ ಹೊಂದುವಂತಿಲ್ಲ. ಜಿಲ್ಲಾ ನ್ಯಾಯಾಧೀಶ ಗೌತಮ್ ಶರ್ಮಾ ಅವರು ಜಿಲ್ಲೆಯ ದರಿಂಗಿಬಾದಿ ಪಂಚಾಯ್ತಿ ಸಮಿತಿಯ ಅಧ್ಯಕ್ಷೆ ಸುಭ್ರೇಂತಿ ಪ್ರಧಾನ್ ಎಂಬುವವರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಒಡಿಶಾ ಪಂಚಾಯತ್ ಸಮಿತಿ ಕಾಯ್ದೆ- 1994ಕ್ಕೆ ತಂದ ತಿದ್ದುಪಡಿ ಅನ್ವಯ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ಯಾವುದೇ ಹುದ್ದೆಗಳನ್ನು ಹೊಂದುವಂತಿಲ್ಲ.

ಪ್ರಧಾನ್ ಅವರು ಜಿ.ಉದಯಗಿರಿ ಕ್ಷೇತ್ರದ ಬಿಜೆಡಿ ಶಾಸಕ ಸಲೂಗಾ ಪ್ರಧಾನ್ ಅವರ ಪತ್ನಿ. ತಜುಂಗಿಯಾ ಪಂಚಾಯತ್ ಸಮಿತಿಯ ಸದಸ್ಯೆ ರೂಡಾ ಮಲ್ಲಿಕ್ ಎಂಬುವವರು ಪ್ರಧಾನ್ ವಿರುದ್ಧ ದೂರು ನೀಡಿದ್ದರು. ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರಧಾನ್ ಎಷ್ಟು ಮಕ್ಕಳಿದ್ದಾರೆ ಎಂಬ ಅಂಶವನ್ನು ಮುಚ್ಚಿಟ್ಟಿದ್ದಾರೆ ಎಂದು ದೂರುದಾರರು ವಾದಿಸಿದ್ದರು. 2017ರ ಪಂಚಾಯ್ತಿ ಸಮಿತಿ ಚುನಾವಣೆ ವೇಳೆ ದರಿಂಗಿಬಾದಿ ಪಂಚಾಯ್ತಿ ಸಮಿತಿ ಅಧ್ಯಕ್ಷೆಯಾಗಿ ಪ್ರಧಾನ್ ಆಯ್ಕೆಯಾಗಿದ್ದರು.

ಪ್ರಧಾನ್ ಉದ್ದೇಶಪೂರ್ವಕವಾಗಿ ಮಕ್ಕಳ ಸಂಖ್ಯೆಯನ್ನು ಮುಚ್ಚಿಟ್ಟು ಪಂಚಾಯ್ತಿರಾಜ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದು ದೂರುದಾರರ ಪರ ವಕೀಲ ಸಿದ್ದೇಶ್ವರದಾಸ್ ವಾದಿಸಿದ್ದರು. 1996ರಲ್ಲಿ ಮಹಿಳೆಗೆ ಒಬ್ಬ ಪುತ್ರ ಇದ್ದ. ಅದಕ್ಕೂ ಮುನ್ನ ಆಕೆಗೆ ಇಬ್ಬರು ಮಕ್ಕಳಿದ್ದರು ಎಂದು ವಾದ ಮಂಡಿಸಿದ್ದರು. ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಧಾನ್ ಹೇಳಿದ್ದಾರೆ.

ಕೇರಳದ ಹಿಂದಿನ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಅಧ್ಯಕ್ಷತೆಯಲ್ಲಿ 1992ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ರಚಿಸಿದ್ದ ಜನಸಂಖ್ಯಾ ಸಮಿತಿಯ ಶಿಫಾರಸಿನ ಅನ್ವಯ ಹಲವು ರಾಜ್ಯಗಳಲ್ಲಿ ಇಬ್ಬರಿಗಿಂತ ಅಧಿಕ ಮಕ್ಕಳನ್ನು ಹೊಂದಿರುವವರು ಪಂಚಾಯತ್‌ರಾಜ್ ಸಂಸ್ಥೆಗಳ ಹುದ್ದೆಗಳಿಗೆ ಅರ್ಹರಲ್ಲ ಎಂಬ ಕಾನೂನು ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News