ಗಾಂಧೀಜಿಯ ಬದುಕು ಎಲ್ಲರಿಗೂ ದಾರಿದೀಪ: ಸಿಎಂ ಯಡಿಯೂರಪ್ಪ

Update: 2019-10-02 12:43 GMT

ಬೆಂಗಳೂರು, ಅ. 2: ಗಾಂಧೀಜಿಯವರ ತತ್ವ, ಸಿದ್ಧಾಂತಗಳು ಎಲ್ಲರಿಗೂ ಅನುಕರಣೀಯ. ಅವರ ಬದುಕೇ ನಮಗೆಲ್ಲರಿಗೂ ದಾರಿದೀಪ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮಗಾಂಧೀಜಿ ವಿಶ್ವವೇ ನೋಡುವಂತಹ ರೀತಿಯಲ್ಲಿ ತಮ್ಮನ್ನು ದೇಶಸೇವೆಗೆ ಸಮರ್ಪಿಸಿಕೊಂಡಿದ್ದಾರೆ ಎಂದರು.

ಸತ್ಯ, ಅಹಿಂಸೆ, ಸರಳತೆಯ ಮೂಲಕ ಜೀವನ ನಡೆಸಿದ್ದಾರೆ. ಮಹಾತ್ಮ ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ್ದರು. ಅವರ ಮಾತಿನಂತೆ ನಾವೆಲ್ಲಾ ಮಹಾತ್ಮ ಗಾಂಧೀಜಿಯವರ ಜೀವನವನ್ನು ಅನುಸರಿಸಬೇಕು ಎಂದು ಯಡಿಯೂರಪ್ಪ ನುಡಿದರು.

ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿದ್ದ ಗಾಂಧೀಜಿಯವರು, ಸ್ವಾತಂತ್ರ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು. ಮಹಾತ್ಮ ಗಾಂಧೀಜಿಯವರು ಅಂದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಇಂದು ನಾವು ಸ್ವಾತಂತ್ರದ ಸವಿಯನ್ನು ಅನುಭವಿಸುತ್ತಿದ್ದೇವೆ. ಅಂತಹ ಮಹಾತ್ಮನ ಸನ್ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಇಂದು ಮಹಾತ್ಮ ಗಾಂಧೀಜಿಯವರ ಹುಟ್ಟಿದ ದಿನ. ಜೊತೆಗೆ ದೇಶದ ಮತ್ತೊಬ್ಬ ಧೀಮಂತ ನಾಯಕ ಲಾಲ್ಬಹದ್ದೂರ್ ಶಾಸ್ತ್ರೀಯವರ ಹುಟ್ಟಿದ ದಿನವೂ ಹೌದು. ಇಂತಹ ಧೀಮಂತರ ಉದಾತ್ತ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಹಾತ್ಮಗಾಂಧಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಜಾಗತಿಕ ನಾಯಕರ ಮೇಲೆ ಗಾಂಧೀಜಿಯವರ ಪ್ರಭಾವ ಅಪಾರ ಇತ್ತು. ವಿದ್ಯಾರ್ಥಿ ಜೀವನದಲ್ಲಿ ತಾವು ಅಮೆರಿಕಾದಲ್ಲಿ ಇದ್ದಾಗ ಗಾಂಧೀಜಿಯವರ ತತ್ವಗಳಿಂದ ಅಮೆರಿಕಾದ ಮಹಾನ್ ನಾಯಕರು ಪ್ರಭಾತರಾಗಿದ್ದನ್ನು ಕಂಡಿದ್ದೇನೆ. ವರ್ಣಭೇದ ನೀತಿ ವಿರುದ್ಧ ಹೋರಾಡಿದ ಅಮೆರಿಕಾದ ಅಧ್ಯಕ್ಷ ಮಾರ್ಟಿನ್‌ಲೂಥರ್ ಕಿಂಗ್ ಜೂನಿಯರ್ ಗಾಂಧೀಜಿಯವರ ಅಹಿಂಸಾ ಅಸ್ತ್ರವನ್ನೆ ಬಳಸಿದ್ದರು ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿಯವರನ್ನು ಎರಡು ಸಂದರ್ಭದಲ್ಲಿ ಭೇಟಿಯಾಗಿದ್ದೇನೆ. ಅದು ನನ್ನ ಜೀವನದ ಪುಣ್ಯ. ನಾನು 2 ವರ್ಷದವನಿದ್ದಾಗ ನಮ್ಮ ಊರಿನಲ್ಲಿ ಹರಿಜನ ಮತ್ತು ಸವರ್ಣೀಯರು ಒಟ್ಟಿಗೆ ಶಾಲೆಗೆ ಹೋಗಿ ಓದುತ್ತಾರೆ, ಆಡುತ್ತಾರೆ ಎಂಬುದನ್ನು ಕೇಳಿದ್ದ ಗಾಂಧೀಜಿಯವರು ನಮ್ಮ ತಂದೆಯನ್ನು ಸಂಪರ್ಕಿಸಿ ನಮ್ಮ ಹಳ್ಳಿಯ ಶಾಲೆಗೆ ಭೇಟಿ ನೀಡಿದ್ದರು. ಇನ್ನೊಮ್ಮೆ ರಾಮಕೃಷ್ಣ ಆಶ್ರಮದಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಮಾತುಗಳನ್ನು ಕೇಳಿದ್ದೆ ಎಂದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸಾಮಾನ್ಯವಾಗಿ ರಾಜಕಾರಣಿಗಳೆಂದರೆ ಸತ್ಯ ಹೇಳುವುದಿಲ್ಲ ಎಂಬ ಅಭಿಪ್ರಾಯವಿದೆ. ಸುಳ್ಳು ಹೇಳಿಕೊಂಡು ರಾಜಕಾರಣಿಗಳು ಬದುಕುತ್ತಾರೆ ಎಂಬ ಮಾತು ಸಾರ್ವತ್ರಿಕವಾಗಿದೆ. ಕಡೇ ಪಕ್ಷ ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹುಟ್ಟಿದ ದಿನವಾದ ಇಂದು ನಾವೆಲ್ಲರೂ ಸತ್ಯವನ್ನೇ ನುಡಿಯುತ್ತೇವೆ ಎಂಬ ಪ್ರಮಾಣ ಮಾಡೋಣ ಎಂದು ನುಡಿದರು.

ಮುಂದಿನ ದಿನಗಳಲ್ಲಿ ಸತ್ಯ ಅಲ್ಲದಿದ್ದರೂ, ಸತ್ಯಕ್ಕೆ ಹತ್ತಿರವಾದುದ್ದನ್ನು ನುಡಿಯೋಣ. ಮತ್ತೊಬ್ಬರಿಗೆ ಹಿಂಸೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡೋಣ. ನಾವು ಮತ್ತೊಬ್ಬರಿಗೆ ಹಿಂಸೆ ಕೊಟ್ಟು ರಾಜಕಾರಣ ಮಾಡುವವರು. ಇದಕ್ಕೆ ಇಂದಿನಿಂದ ಮುಕ್ತಿ ಹಾಡೋಣ ಎಂದರು.

ಆಧ್ಯಾತ್ಮಿಕ ಚಿಂತಕ ವಿನಯ್ ಗುರೂಜೀ ಮಾತನಾಡಿ, ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ನಾಗರಿಕ ಸಮಾಜ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ದೂರವಾಗಲಿವೆ. ಎಲ್ಲರನ್ನೂ ಪ್ರೀತಿಸಿ, ಯಾರನ್ನೂ ದ್ವೇಷಿಸದೆ ಎಲ್ಲರಿಗೂ ದಯೆತೋರಿ ಬದುಕಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ಎಚ್.ಆರ್.ನಾಗೇಂದ್ರರವರಿಗೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಸ್.ಆರ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News