ಗೋಡ್ಸೆ ಆರಾಧನೆಯ ನಡುವೆಯೇ ಗಾಂಧಿ ಕನಸಿನ ಭಾರತ ನಿರ್ಮಿಸೋಣ: ಎಚ್.ಎಸ್.ದೊರೆಸ್ವಾಮಿ

Update: 2019-10-02 13:35 GMT

ಬೆಂಗಳೂರು, ಅ.2: ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಮತಗಳಿಸುವುದು ಬಿಜೆಪಿ ಪಕ್ಷಕ್ಕೆ ಸಾಮಾನ್ಯವಾಗಿಬಿಟ್ಟಿದೆ. ಒಂದು ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಓಕೆ) ವಶಪಡಿಸಿಕೊಂಡರೆ ಇಡೀ ಭಾರತವನ್ನು ಬಿಜೆಪಿಗೆ ಬರೆದುಕೊಡುವ ಜೊತೆಗೆ, ಗುಲಾಮರಾಗಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಬುಧವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ, ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಪ್ರಯುಕ್ತ ಸಿ.ಎನ್. ರಾಮಚಂದ್ರನ್ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯ ಹಾಗೂ ಮಹಾತ್ಮ ಗಾಂಧಿ ಇನ್ ಕನ್ನಡ ಲಿಟರೇಚರ್’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಾಂಬ್ ದಾಳಿ, ಭಯೋತ್ಪಾದಕರ ಹತ್ಯೆ ಸೇರಿದಂತೆ ಭಾವನಾತ್ಮಕ ವಿಚಾರಗಳೇ ಚುನಾವಣೆಗಳಲ್ಲಿ ಮತಗಳಿಸುವ ಅಸ್ತ್ರಗಳಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಅಲ್ಲದೆ, ಧರ್ಮ, ಜಾತಿ, ಭಾಷೆ, ವೈಯಕ್ತಿಕ ಸಂಬಂಧದ ಆಧಾರದ ಮೇಲೆ ಭಾವನಾತ್ಮಕವಾಗಿ ಮತ ಚಲಾಯಿಸಿ, ಬಲಿಪಶುಗಳಾಗುತ್ತಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಆರಾಧನೆ ಮಾಡುವ ಗುಂಪು ಹುಟ್ಟಿಕೊಂಡಿದೆ. ಆದರೆ, ನಾವು ಅವರ ಮಧ್ಯೆ ಗಾಂಧಿ ಅವರ ಗುಡಿ ಕಟ್ಟಿ ಪೂಜಿಸಬಾರದು. ಬದಲಾಗಿ, ಗಾಂಧಿ ಕನಸಿನ ಭಾರತ ನಿರ್ಮಿಸುವ ಗುರಿ ಹೊಂದಬೇಕು ಎಂದು ತಿಳಿಸಿದರು.

ವಿದೇಶಿ ಉಡುಪುಗಳನ್ನು ತೊರೆಯಬೇಕು, ಸ್ವದೇಶಿ ಉಡುಪುಗಳನ್ನು ಧರಿಸಬೇಕು. ಸ್ವದೇಶಿ ಆಂದೋಲನದ ಬಿಸಿಯನ್ನು ಬ್ರಿಟಿಷರಿಗೆ ಮುಟ್ಟಿಸಬೇಕೆಂಬ ಸದಾಶಯವು ಗಾಂಧಿ ತತ್ವದಲ್ಲಿ ಸೇರಿತ್ತು. ಆದರೆ, ಕೇಂದ್ರ ಸರಕಾರ ವಿದೇಶಿ ಬಂಡವಾಳಗಾರರಿಗೆ ಆದ್ಯತೆ ನೀಡಿ, ಸ್ವದೇಶಿ ಸಂಸ್ಕೃತಿ ನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಹಿರಿಯ ಕವಿ ಜಯಂತ ಕಾಯ್ಕಿಣಿ, ಇಡೀ ಸಮಾಜವೇ ಒಂದು ಧರ್ಮ ಎನ್ನುವ ನಿಲುವನ್ನು ಹೊಂದಿದ್ದ ಗಾಂಧಿ ಅವರು, ಯುವಸಮೂಹದ ಶಕ್ತಿಯ ನೆರವಿನಿಂದ ದೇಶದ ಚಿತ್ರಣ ಬದಲಾಯಿಸಲು ಸಾಧ್ಯ ಎಂದು ನಂಬಿದ್ದರು. ವಿಶ್ವವಿದ್ಯಾಲಯಗಳು ಅಶ್ವಶಾಲೆಗಳಾಗಬಾರದು ಎನ್ನುವುದು ಗಾಂಧೀಜಿ ಅಭಿಮತವಾಗಿತ್ತು ಎಂದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ಪ್ರಾಧ್ಯಾಪಕ ಡಾ.ಗಣೇಶ ದೇವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News