ಕಳವು ಪ್ರಕರಣ: ಗಿರವಿ ಅಂಗಡಿ ಮಾಲಕ ಸೇರಿ ಮೂವರ ಸೆರೆ

Update: 2019-10-02 14:12 GMT

ಬೆಂಗಳೂರು, ಅ.2: ಕಳ್ಳತನ ಪ್ರಕರಣ ಸಂಬಂಧ ಗಿರವಿ ಅಂಗಡಿ ಮಾಲಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಿರುವ ಇಲ್ಲಿನ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು, 17 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದೊಡ್ಡಬಳ್ಳಾಪುರದ ಪ್ರವೀಣ್(23), ಗೊರಗುಂಟೆ ಪಾಳ್ಯದ ಮಧುಕುಮಾರ್(39) ಹಾಗೂ ರಾಜಸ್ತಾನ ಮೂಲದ ಗಿರವಿ ಅಂಗಡಿ ಮಾಲಕ ಪ್ರವೀಣ್ ಕುಮಾರ್ (42)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ, ಪ್ರವೀಣ್ ಹಾಗೂ ಮಧುಕುಮಾರ್ ಹಿಂದೆ ಕೂಡ ಕಳವು ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ಐಷಾರಾಮಿ ಜೀವನಕ್ಕಾಗಿ ಮತ್ತೆ ಕನ್ನಗಳವು ಕೃತ್ಯ ನಡೆಸುತ್ತಿದ್ದರು. ಆರೋಪಿಗಳಿಂದ ದಾಸರಹಳ್ಳಿಯಲ್ಲಿ ಗಿರವಿ ಅಂಗಡಿ ಇಟ್ಟುಕೊಂಡಿದ್ದ ಪ್ರವೀಣ್ ಕುಮಾರ್, ಕಳವು ಮಾಡಿದ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದು, ಬಂಧಿತ ಕನ್ನಗಳ್ಳರಿಗೆ ಯಾವಾಗ ಬೇಕಾದರೂ ಹಣ ನೀಡಿ ಕಳ್ಳತನಕ್ಕೆ ಪ್ರೇರೇಪಿಸುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಬಂಧನದಿಂದ ಆರ್‌ಎಂಸಿ ಯಾರ್ಡ್, ಯಲಹಂಕ, ನಂದಿನಿ ಲೇಔಟ್, ಪೀಣ್ಯ, ಸುಬ್ರಮಣ್ಯಪುರ ತಲಾ 1 ಸೇರಿ 6 ಕನ್ನಗಳವು, 4 ಮನೆಗಳವು ಒಳಗೊಂಡು 10 ಪ್ರಕರಣಗಳು ಪತ್ತೆಯಾಗಿವೆ. ಇವರಿಂದ 495 ಗ್ರಾಂ ಚಿನ್ನ, 40 ಸಾವಿರ ರೂ. ನಗದು ಸೇರಿದಂತೆ 7 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News