ಬ್ರಾಡ್ಮನ್ ದಾಖಲೆ ಸರಿಗಟ್ಟಿದ ರೋಹಿತ್

Update: 2019-10-02 18:14 GMT

ವಿಶಾಖಪಟ್ಟಣ, ಅ.2: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೊದಲ ಬಾರಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಶತಕ ಸಿಡಿಸಿ ಮಿಂಚಿದರು. ಟೆಸ್ಟ್‌ನಲ್ಲಿ 4ನೇ ಶತಕ ಸಿಡಿಸಿದ ಅವರು ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 98.22 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯದ ಲೆಜೆಂಡ್ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದರು.

  ರೋಹಿತ್ ಸ್ವದೇಶದಲ್ಲಿ 15 ಟೆಸ್ಟ್ ಇನಿಂಗ್ಸ್‌ಗಳಲ್ಲಿ 4 ಶತಕ ಹಾಗೂ ಐದು ಅರ್ಧಶತಕಗಳ ಸಹಿತ 884 ರನ್ ಗಳಿಸಿದ್ದಾರೆ. ಇದು 10ಕ್ಕೂ ಅಧಿಕ ಇನಿಂಗ್ಸ್‌ನಲ್ಲಿ ಜಂಟಿ ಶ್ರೇಷ್ಠ ಸಾಧನೆಯಾಗಿದೆ. ಸ್ವದೇಶದಲ್ಲಿ 50 ಇನಿಂಗ್ಸ್ ಗಳಲ್ಲಿ 98.22 ಸರಾಸರಿ ಕಾಯ್ದುಕೊಂಡಿದ್ದ ಡಾನ್ ಬ್ರಾಡ್ಮನ್ ಅವರೊಂದಿಗೆ ರೋಹಿತ್ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಮೊದಲ ಬಾರಿ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಎನಿಸಿಕೊಂಡ ರೋಹಿತ್ ಅವರು ಶಿಖರ್ ಧವನ್, ಕೆಎಲ್ ರಾಹುಲ್ ಹಾಗೂ ಪೃಥ್ವಿ ಶಾ ಸಾಧನೆ ಸರಿಗಟ್ಟಿದರು. ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ಭಾರತದ ಮೊದಲ ದಾಂಡಿಗ ರೋಹಿತ್. ಆರಂಭಿಕ ಆಟಗಾರನಾಗಿ ರೋಹಿತ್ ಟೆಸ್ಟ್,ಏಕದಿನ ಹಾಗೂ ಟಿ-20ಯಲ್ಲಿ ಶತಕ ಬಾರಿಸಿದ ವಿಶ್ವದ 7ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ತಿಲಕರತ್ನೆ ದಿಲ್ಶನ್, ಅಹ್ಮದ್ ಶಹಝಾದ್, ಶೇನ್ ವಾಟ್ಸನ್ ಹಾಗೂ ತಮೀಮ್ ಇಕ್ಬಾಲ್ ಈ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News