ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

Update: 2019-10-03 09:31 GMT

ಬೆಂಗಳೂರು: ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿನ ಹಿಂದೆ ಇರುವ ಹಲವು ಕಾರಣಗಳಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಸರ್ವಾಧಿಕಾರಿ ಧೋರಣೆ ಕೂಡ ಒಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ಗುರುವಾರ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ.

 2018 ವಿಧಾನಸಭಾ ಚುನಾವಣೆ ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಪಕ್ಷದ  ಸೋಲಿಗೆ ಕಾರಣಗಳನ್ನು ಕಂಡು ಹಿಡಿಯುವ ಉದ್ದೇಶದಿಂದಹಿರಿಯ ನಾಯಕ ವಿ ಆರ್ ಸುದರ್ಶನ್  ಅವರ ನೇತೃತ್ವದ ಆರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.

ಕೋಲಾರದಲ್ಲಿ ಮಾಜಿ ಸಚಿವ ಕೆ ಎಚ್ ಮುನಿಯಪ್ಪ ಸೋಲಿಗೆ ಕಾಂಗ್ರೆಸ್ ಪಕ್ಷದ ಕೆ ಆರ್ ರಮೇಶ್ ಕುಮಾರ್ ಹಾಗೂ ವರ್ತೂರ್ ಪ್ರಕಾಶ್ ಜತೆ ಅವರಿಗಿದ್ದ ವೈಯಕ್ತಿಕ ವೈಮನಸ್ಸು ಕಾರಣ ಎಂದು ವರದಿ ಹೇಳಿದೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್ ಡಿ ದೇವೇಗೌಡರ ಸೋಲಿಗೆ 'ಕುಟುಂಬ ರಾಜಕಾರಣ' ಕಾರಣ ಎಂದು ಹೇಳಿರುವ ಸಮಿತಿಯ ವರದಿಯು ಗೌಡರ ವಿರುದ್ಧ ಚಲಾಯಿಸಲ್ಪಟ್ಟ ಲಿಂಗಾಯತ ಮತಗಳೂ ಸೋಲಿಗೆ ಕಾರಣವಾಯಿತು ಎಂದಿದೆ.

ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಷಿಸುವ ವಿವಾದಾತ್ಮಕ ನಿರ್ಣಯ ಹಾಗೂ ಕಾಂಗ್ರೆಸ್ ನಾಯಕರ ಅತಿಯಾದ ಆತ್ಮವಿಶ್ವಾಸ 2018 ವಿಧಾನಸಭಾ ಚುನಾವಣೆಯಲ್ಲಿ ಮುಳುವಾಯಿತು ಎಂದು ಸಮಿತಿ ಕಂಡುಕೊಂಡಿದೆ. ಲಿಂಗಾಯತ ವಿಚಾರದಲ್ಲಿ ಬಿಜೆಪಿಯ ಅಪಪ್ರಚಾರವನ್ನು ಹತ್ತಿಕ್ಕಲೂ ಪಕ್ಷ ವಿಫಲವಾಗಿತ್ತು ಎಂದು  ವರದಿ ತಿಳಿಸಿದೆ.

ಸಮಿತಿಯ 63 ಪುಟಗಳ ವರದಿಯನ್ನು ಮಂಗಳವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಅವರಿಗೆ ಸಲ್ಲಿಸಲಾಗಿದೆ. ವರದಿಯ ಅಧ್ಯಯನ ನಡೆಸಿ ಮುಂದಿನ ನಿರ್ಧಾರದ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದಿನೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News