ಸ್ನೇಹಿತನನ್ನು ಜೈಲಿನಿಂದ ಬಿಡಿಸಲು ದರೋಡೆ: ಅಪ್ರಾಪ್ತ ಬಾಲಕ ಸೇರಿ 6 ಮಂದಿಯ ಬಂಧನ

Update: 2019-10-03 12:45 GMT

ಬೆಂಗಳೂರು,ಅ.3: ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಸ್ನೇಹಿತನಿಗೆ ಜಾಮೀನು ಕೊಡಿಸುವ ಸಲುವಾಗಿ ದರೋಡೆ ಮಾಡಿದ್ದ ಅಪ್ರಾಪ್ತ ಬಾಲಕ ಸೇರಿ 6 ಮಂದಿಯ ತಂಡವನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿ, ಆರೋಪಿಗಳಿಂದ ಒಂದು ಲಕ್ಷ ರೂ. ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಬಿಟಿಎಂ ನಿವಾಸಿ ರತ್ನವೇಲು ಪಾಂಡ್ಯ(23), ಅರುಣಾಚಲೇಶ್ವರ (23), ಎನ್.ಎಸ್.ಪಾಳ್ಯದ ಪವನ್(20), ಜಯನಗರದ ಜಯಂತ್ (19), ಸಿದ್ದಾಪುರದ ಸತೀಶ್ (27) ಹಾಗೂ 17 ವರ್ಷದ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಮಾಹಿತಿ ನೀಡಿದ್ದಾರೆ. ಈ ಬಂಧಿತ ಆರೋಪಿಗಳು ಜೋಡಿ ಕೊಲೆ ಪ್ರಕರಣದಲ್ಲಿ ಗುಂಡೇಟು ತಿಂದು ಜೈಲು ಸೇರಿರುವ ರೌಡಿ ಬಿಟಿಎಸ್ ಮಂಜನ ಸ್ನೇಹಿತರಾಗಿದ್ದಾರೆ. ರೌಡಿ ಮಂಜನನ್ನು ಜಾಮೀನಿನ ಮೇಲೆ ಬಿಡಿಸಲು ಹಣ ಸಂಗ್ರಹಕ್ಕಾಗಿ ಆರೋಪಿಗಳು ದರೋಡೆ ಮಾಡಲು ಷಡ್ಯಂತ್ರಗಳನ್ನು ರೂಪಿಸಿದ್ದಾರೆ.

ಅದರ ಭಾಗವಾಗಿ ಜೂ.13ರಂದು ಕೋರಮಂಗಲದ ಬಳಿಯ ಎಸ್‌ಬಿಐ ಸಿಬ್ಬಂದಿ ಶ್ಯಾಮ್, ತನ್ನ ಗ್ರಾಹಕರಿಂದ ಸಂಗ್ರಹಿಸಿದ್ದ 3 ಲಕ್ಷ ರೂ.ನ್ನು ಬೈಕ್‌ನ ಡಿಕ್ಕಿಯಲ್ಲಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‌ನಲ್ಲಿ ಬಂದ ಆರು ಮಂದಿ ಆರೋಪಿಗಳು ಶ್ಯಾಮ್ ಹೋಗುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದಾರೆ. ನಂತರ ಬೈಕ್‌ನ್ನು ದುರಸ್ಥಿ ಮಾಡಿಸಿಕೊಡುವುದಾಗಿ ನೆಪ ಹೇಳಿ ಬೈಕ್‌ನ ಡಿಕ್ಕಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News