ನನ್ನ ಕಡೆಗಣನೆ ಬೇಡ: ನಳೀನ್ ಕುಮಾರ್ ಗೆ ಬಿಎಸ್‌ವೈ ತರಾಟೆ

Update: 2019-10-03 13:57 GMT

ಬೆಂಗಳೂರು, ಅ. 3: ಪಕ್ಷದ ಉಪಾಧ್ಯಕ್ಷರುಗಳ ನೇಮಕ, ಬಿಬಿಎಂಪಿ ಮೇಯರ್ ಆಯ್ಕೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಖುದ್ದು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮಾಧಾನ ಪಡಿಸಿದ್ದಾರೆಂದು ಗೊತ್ತಾಗಿದೆ.

ಗುರುವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಕ್ಷದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಸಮಜಾಯಿಷಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಕಡೆಗಣನೆ ಸಲ್ಲ: ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ವೇಳೆ ತನ್ನನ್ನು ಕಡೆಗಣಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆಕ್ಷೇಪಿಸಿದ್ದು, ನಳೀನ್ ಕುಮಾರ್ ಕಟೀಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಪಕ್ಷ ಬಲಪಡಿಸಲು ಚರ್ಚೆ: ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಿಡುಗಡೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.

ಪಕ್ಷದ ಯಾವುದೇ ನಾಯಕರನ್ನೂ ಕೈಬಿಡುವ ಪ್ರಶ್ನೆ ಇಲ್ಲ. ಪಕ್ಷವನ್ನು ಬಲಪಡಿಸುವ ಕುರಿತು ಸಮಾಲೋಚನೆ ನಡೆಸಿದ್ದೇವೆ. ನೆರೆ ಪರಿಹಾರ ನೀಡಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ದೂಷಿಸುವ ಅಗತ್ಯ ಇಲ್ಲ. ಕೇಂದ್ರದ ನೆರವು ವಿಳಂಬವಾಗಿದ್ದರೂ ನೆರೆ ಪರಿಹಾರವನ್ನು ಕೈಗೊಳ್ಳುವಲ್ಲಿ ರಾಜ್ಯ ಸರಕಾರ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.

ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಈಗಾಗಲೇ ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರ ಇನ್ನೂ ಎರಡು-ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಪರಿಹಾರ ಪ್ರಕಟಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಅವರಿಗೆ ರಾಜ್ಯದ ಅರಿವಿದೆ. ಹೀಗಾಗಿ ಪ್ರಧಾನಿ ಭೇಟಿ ಅಗತ್ಯವಿಲ್ಲ ಎಂದರು.

ಗೊಂದಲವಿಲ್ಲ: ಪಕ್ಷ ಸಂಘಟನೆ, ಉಪಚುನಾವಣೆ ಗೆಲ್ಲುವ ಸಂಬಂಧ ಚರ್ಚಿಸಿದ್ದು, ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶಕರು. ಪದಾಧಿಕಾರಿಗಳ ಬದಲಾವಣೆ ವಿಚಾರದಲ್ಲಿ ನನ್ನ ಮತ್ತು ಯಡಿಯೂರಪ್ಪಮಧ್ಯೆ ಯಾವುದೇ ಗೊಂದಲವಿಲ್ಲ ಎಂದು ನಳೀನ್‌ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ನಿಯಮವಿದೆ. ಹೀಗಾಗಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಿ.ಟಿ.ರವಿ ಅವರ ಸ್ಥಾನಕ್ಕೆ ಮಹೇಶ್ ಟೆಂಗಿನಕಾಯಿ ಅವರನ್ನು ನೇಮಿಸಲಾಗಿದೆ ಎಂದ ನಳೀನ್ ಕುಮಾರ್ ಕಟೀಲ್, ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ಅಮಿತ್ ಶಾ ಮತ್ತು ಬಿಎಸ್‌ವೈ ಕೂತು ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದರು.

ಅನರ್ಹ ಶಾಸಕರಿಗೆ ಅನ್ಯಾಯ ಆಗದು

‘ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ಅನರ್ಹ ಶಾಸಕರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ. ಅನರ್ಹರಿಗೆ ಟಿಕೆಟ್ ನೀಡುವ ವಿಚಾರ ಸಂಬಂಧ ವರಿಷ್ಠರು ನಿರ್ಧರಿಸಲಿದ್ದಾರೆ’

-ನಳೀನ್‌ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News