ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾರ್ಯವೈಖರಿಯ ಆತ್ಮಾವಲೋಕನ ಅಗತ್ಯ: ಎಚ್.ಕೆ.ಪಾಟೀಲ್

Update: 2019-10-03 17:10 GMT

ಬೆಂಗಳೂರು, ಅ.3: ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯವೈಖರಿ ನಮ್ಮನ್ನೆಲ್ಲ ಆತ್ಮಾವಲೋಕನ ಮಾಡಲೇಬೇಕಾದ ಸ್ಥಿತಿಗೆ ತಂದಿದೆ. ಬೇರೆ ಬೇರೆ ಪಕ್ಷದ ಸರಕಾರಗಳು ರಾಜ್ಯದಲ್ಲಿ ಆಡಳಿತ ನಡೆಸಿವೆ. ಈ ಆಡಳಿತದ ಸಂದರ್ಭದಲ್ಲಿ ಹೊರಹೊಮ್ಮಿದ ಹಣಕಾಸಿನ ಅವ್ಯವಸ್ಥೆಯನ್ನು ಚಿಕಿತ್ಸಕ ಮನೋಭಾವದಿಂದ ನೋಡಬೇಕಾದ ಅಗತ್ಯತೆ ಇದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹೇಳಿದರು.

ಗುರುವಾರ ವಿಧಾನಸೌಧದಲ್ಲಿ ನಡೆದ 15ನೇ ವಿಧಾನಸಭೆಯ ಪುನರ್ಘಟಿತ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 1992-2001ರ ವರೆಗಿನ 236 ಲೆಕ್ಕಪರಿಶೋಧನಾ ಕಂಡಿಕೆಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸದೇ ಓದಿದಂತೆ ಎಂದು ಪರಿಭಾವಿಸಿ ಮುಕ್ತಾಯಗೊಳಿಸಿದೆ ಎಂದರು.

2001-2017ರ ವರೆಗಿನ ಅನೇಕ ಕಂಡಿಕೆಗಳನ್ನು ಇನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಈ 25 ವರ್ಷಗಳ ಕಾರ್ಯವೈಖರಿ ನೋಡಿದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪ್ರಸ್ತುತತೆಯೇ ಸಾರ್ವಜನಿಕರ ದೃಷ್ಟಿಯಲ್ಲಿ ಪ್ರಶ್ನಾರ್ಹವಾಗುತ್ತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. 2003-04 ರಿಂದ 2016-17ನೇ ಅವಧಿಯ ಒಟ್ಟು 419 ಕಂಡಿಕೆಗಳು ಸಮಿತಿಯಿಂದ ಚರ್ಚೆಗೊಳಗಾಗಬೇಕಾಗಿರುವುದು ಬಾಕಿ ಇದೆ. ಇಲಾಖೆಯಿಂದ ಟಿಪ್ಪಣಿ ಬಂದಿದ್ದರೂ ಇನ್ನೂ 405 ಕಂಡಿಕೆಗಳು ಚರ್ಚೆ ಮಾಡಿ ಶಿಫಾರಸು ಅಂತಿಮಗೊಳಿಸಬೇಕಾಗಿದೆ. ಇವುಗಳಲ್ಲಿ 14 ಕಂಡಿಕೆಗಳಿಗೆ ಇಲಾಖಾ ಟಿಪ್ಪಣಿಗಳೇ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳ ಈಗಾಗಲೇ ಸಿಎಜಿಯಿಂದ ಸಲ್ಲಿಕೆಯಾಗಿರುವ 77 ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ/ಅನುಪಾಲನಾ ಲೆಕ್ಕಪರಿಶೋಧನೆಗಳ 1749 ಕಂಡಿಕೆಗಳೂ ಸಮಿತಿಯಿಂದ ಪರಿಶೀಲನೆಗೊಳಗಾಗಬೇಕಿದೆ. ಈ ಹಿನ್ನೆಲೆಯಲ್ಲಿ, ಚರ್ಚೆಗೆ ಬಾಕಿ ಇರುವ ಕಂಡಿಕೆಗಳ ತ್ವರಿತ ಇತ್ಯರ್ಥಕ್ಕೆ ಸಮಿತಿಯು ವಿಶಿಷ್ಟ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು. ಇದಲ್ಲದೆ, 2012-13ರಿಂದ 2016-17ರ ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ವರದಿಗಳಲ್ಲಿ ಉಲ್ಲೇಖಿಸಲಾದ ಆಯವ್ಯಯಕ್ಕಿಂತ ಅಧಿಕ ವೆಚ್ಚವಾಗಿರುವ 2210.07 ಕೋಟಿ ರೂ.ಮೊತ್ತದ ಕುರಿತು ಸಮಿತಿಯು ಚರ್ಚೆ ನಡೆಸಿ, ಅಂತಿಮ ನಿಲುವು ತಳೆದು ಸಕ್ರಮಗೊಳಿಸುವಿಕೆ ಅಥವಾ ಇತರೇ ನಿರ್ಣಯಕ್ಕೆ ವಿಧಾನಮಂಡಲಕ್ಕೆ ಸಲ್ಲಿಸಬೇಕಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಪ್ರಸಕ್ತ ಅಂಕಿ-ಅಂಶಗಳ ಅನುಗುಣವಾಗಿ ಚರ್ಚೆಗೆ ಬಾಕಿ ಇರುವ 419 ಕಂಡಿಕೆಗಳ ಪೈಕಿ, ಅಂದಾಜು 1,220 ಕೋಟಿ ರೂ.ಮೌಲ್ಯದ 135 ಕಂಡಿಕೆಗಳು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ರಾಜಸ್ವ ಸ್ವೀಕೃತಿಯ ವರದಿಗೆ ಸಂಬಂಧಪಟ್ಟಿದೆ ಎಂದು ಅವರು ತಿಳಿಸಿದರು. ರಾಜ್ಯ ಮುಂಗಡ ಪತ್ರದ ಶೇ.50ರಷ್ಟು ಭಾಗವನ್ನು ವೆಚ್ಚ ಮಾಡುವ ಜನತೆಯ ದೈನಂದಿನ ಬದುಕಿಗೆ ಸಂಬಂಧವಿರುವ ಲೋಕೋಪಯೋಗಿ, ಕೃಷಿ, ಶಿಕ್ಷಣ, ವೈದ್ಯಕೀಯ ಶಿಕ್ಷಣ, ಸಾರಿಗೆ ಮುಂತಾದ ಇಲಾಖೆಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸುಗಳಿಗೆ ಉತ್ತರ ನೀಡುವಲ್ಲಿ ಕನಿಷ್ಠ 14 ರಿಂದ 20 ವರ್ಷ ತೆಗೆದುಕೊಂಡ ಕಳವಳಕಾರಿ ಅಂಶ ಆಘಾತ ತಂದಿತು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಇಲಾಖೆಗಳು ಅನುಪಾಲನಾ ವರದಿಗಳನ್ನು ನೀಡುವ ಕ್ರಮ ಮತ್ತು ಕಾಲಮಿತಿ ಕಾರ್ಯಕ್ರಮ ತಕ್ಷಣದಿಂದ ಅನುಷ್ಠಾನಗೊಳ್ಳಬೇಕು. ಈ ಕರ್ತವ್ಯದಲ್ಲಿ ವಿಮುಖಗೊಳ್ಳುವ ಅಥವಾ ದುರುದ್ದೇಶದಿಂದ ಸಮಿತಿಗೆ ಉತ್ತರ ಒದಗಿಸದ ಅಥವಾ ಒದಗಿಸಲು ವಿಳಂಬದ್ರೋಹವೆಸಗುವ ಅಧಿಕಾರಿಗಳಿಗೆ ನಿಯಮಬದ್ಧವಾದ ಅಂಕುಶ ಹಾಕಬೇಕು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News