ಮಹಾರಾಷ್ಟ್ರ ಚುನಾವಣೆ: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಮಪತ್ರ ಸಲ್ಲಿಕೆ

Update: 2019-10-04 16:15 GMT

ನಾಗ್ಪುರ,ಅ.4: ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಬೃಹತ್ ರೋಡ್‌ಶೋ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ನಾಗ್ಪುರ ಸಂಸದ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ, ಫಡ್ನವೀಸ್ ಜೊತೆಗಿದ್ದರು.

 ರೋಡ್‌ಶೋಗೂ ಮೊದಲು ಗಡ್ಕರಿಯವರ ನಿವಾಸಕ್ಕೆ ತೆರಳಿದ ಫಡ್ನವೀಸ್ ದಂಪತಿ ಅಲ್ಲಿ ಕೇಂದ್ರ ಸಚಿವ ಮತ್ತು ಅವರ ಪತ್ನಿಯ ಆಶೀರ್ವಾದ ಪಡೆದರು. ನಂತರ ಫಡ್ನವೀಸ್ ಮತ್ತು ಗಡ್ಕರಿ ತೆರೆದ ವಾಹನದಲ್ಲಿ ಪಕ್ಷದ ಧ್ವಜವನ್ನು ಹಿಡಿದು ನೆರೆದಿದ್ದ ಜನಸಾಗರದತ್ತ ಕೈಬೀಸುತ್ತಾ ಸಾಗಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ ಪಾಟಿಲ್ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಮತ್ತು ಗಡ್ಕರಿ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಫಡ್ನವೀಸ್, ನಮ್ಮನ್ನು ಮಹಾರಾಷ್ಟ್ರ ಮತ್ತು ನಾಗ್ಪುರದ ಜನರು ಆಶೀರ್ವಾದಿಸಿದ್ದಾರೆ. ನಾನು ಸುಧಾರಣಾ ಅಭಿವೃದ್ಧಿಯಲ್ಲಿ ನಂಬಿಕೆಯಿಟ್ಟವನು ಮತ್ತು ಈ ಹಿಂದೆ ನಡೆದಿರುವ ಎಲ್ಲ ಅಭಿವೃದ್ಧಿಗಳು ಬಿಜೆಪಿಯಿಂದ ಮಾಡಲ್ಪಟ್ಟಿವೆ ಹಾಗಾಗಿ ಈ ಬಾರಿ ಬಿಜೆಪಿ ಬೃಹತ್ ಅಂತರದಿಂದ ಗೆಲುವು ಸಾಧಿಸಲಿದೆ. ನಾವು ನಾಗ್ಪುರದ ಎಲ್ಲ 12 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಅಕ್ಟೋಬರ್ 7 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News