ಈ ದೇಶದಲ್ಲಿನ್ನು ವಿದೇಶಿ ಪುರುಷ- ಮಹಿಳೆ ಕೊಠಡಿ ಹಂಚಿಕೊಳ್ಳಬಹುದು !

Update: 2019-10-05 05:41 GMT

ರಿಯಾದ್: ಪರಸ್ಪರ ಸಂಬಂಧ ಇದ್ದು ನಿರೂಪಿಸದಿದ್ದರೂ ಇನ್ನು ಮುಂದೆ ವಿದೇಶಿ ಪುರುಷ ಹಾಗೂ ಮಹಿಳೆಯರು ಹೋಟೆಲ್ ಕೊಠಡಿ ಹಂಚಿಕೊಳ್ಳಬಹುದು ಎಂಬ ನಿಯಮವನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ.

ವಿಹಾರಕ್ಕಾಗಿ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಪ್ರವಾಸಿ ವೀಸಾ ನೀತಿಯನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ. ಹೊಸ ನೀತಿಯ ಅನ್ವಯ, ವಿದೇಶಿ ಪುರುಷ ಹಾಗೂ ಮಹಿಳೆ ಜತೆಯಾಗಿ ಕೊಠಡಿ ಬಾಡಿಗೆಗೆ ಪಡೆಯಬೇಕಿದ್ದರೆ, ತಮ್ಮ ಸಂಬಂಧವನ್ನು ನಿರೂಪಿಸಬೇಕು ಎಂಬ ನಿರ್ಬಂಧವನ್ನು ಸಡಿಲಿಸಲಾಗಿದೆ. ಹಿಂದಿನ ನಿರ್ಬಂಧವನ್ನು ಸಡಿಲಿಸಿ, ಸೌದಿ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರು ಸ್ವತಃ ತಾವಾಗಿಯೇ ಹೋಟೆಲ್ ಕೊಠಡಿಯನ್ನು ಬಾಡಿಗೆಗೆ ಪಡೆಯಲು ಕೂಡಾ ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಈ ನಡೆಯಿಂದಾಗಿ, ಒಬ್ಬಂಟಿ ಮಹಿಳೆಯರು ಕೂಡಾ ಸುಲಭವಾಗಿ ಪ್ರವಾಸ ಕೈಗೊಳ್ಳಬಹುದಾಗಿದೆ. ವಿವಾಹೇತರ ಲೈಂಗಿಕ ಸಂಬಂಧ ನಿಷೇಧ ಇರುವ ಈ ರಾಷ್ಟ್ರದಲ್ಲಿ ಇದೀಗ ಅವಿವಾಹಿತ ವಿದೇಶಿ ಪ್ರವಾಸಿಗರು ಜತೆಗೆ ತಂಗಲು ಅವಕಾಶ ಕಲ್ಪಿಸಲಾಗಿದೆ.

ಅರೇಬಿಕ್ ಭಾಷೆಯ ಓಕಾರ್ ಪತ್ರಿಕೆ ಈ ಸಂಬಂಧ ಶುಕ್ರವಾರ ಪ್ರಕಟಿಸಿದ ವರದಿಯನ್ನು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಸಮಿತಿ ದೃಢಪಡಿಸಿದ್ದು, "ಹೋಟೆಲ್ ಕೊಠಡಿ ಬಾಡಿಗೆಗೆ ಪಡೆಯುವಾಗ ಎಲ್ಲ ಸೌದಿ ಪ್ರಜೆಗಳು ತಮ್ಮ ಕುಟುಂಬದ ಐಡಿ ಅಥವಾ ಸಂಬಂಧದ ಪುರಾವೆಯನ್ನು ತೋರಿಸುವುದು ಕಡ್ಡಾಯ. ಆದರೆ ವಿದೇಶಿ ಪ್ರವಾಸಿಗರಿಗೆ ಇದು ಅಗತ್ಯವಿಲ್ಲ. ಸೌದಿ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರು ಐಡಿ ಕಾರ್ಡ್ ನೀಡಿ ಒಂಟಿಯಾಗಿಯೇ ಕೊಠಡಿ ಕಾಯ್ದಿರಿಸಬಹುದು" ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಮತ್ತು ತನ್ನ ಆರ್ಥಿಕತೆಯನ್ನು ಕೇವಲ ತೈಲ ರಫ್ತಿಗೆ ಸೀಮಿತಗೊಳಿಸದೇ ವಿಸ್ತೃತಗೊಳಿಸುವ ಸಲುವಾಗಿ ಕಳೆದ ವಾರ ಸೌದಿ ಅರೇಬಿಯಾ 49 ದೇಶಗಳ ಪ್ರವಾಸಿಗರಿಗೆ ಪ್ರವಾಸೋದ್ಯಮದ ಬಾಗಿಲು ತೆರೆದಿತ್ತು. ಇದಲ್ಲದೇ, ಪ್ರವಾಸಿಗರು ಇಡೀ ದೇಹವನ್ನು ಮುಚ್ಚುವ ಕಪ್ಪು ನಿಲುವಂಗಿ ಧರಿಸಬೇಕು ಎಂಬ ನಿಯಮಾವಳಿಯನ್ನೂ ಸಡಿಲಿಸಿದೆ. ಆದರೆ ಸಭ್ಯ ಉಡುಪು ಧರಿಸುವಂತೆ ಸೂಚಿಸಿದೆ ಮತ್ತು ಆಲ್ಕೋಹಾಲ್ ನಿಷೇಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News