ವಾಹನ ದಟ್ಟಣೆ ನಿವಾರಣೆಗೆ ಸಾರ್ವಜನಿಕರಿಂದ ಸಲಹೆ ಕೇಳಿದ ಪೊಲೀಸ್ ಇಲಾಖೆ

Update: 2019-10-05 16:40 GMT

ಬೆಂಗಳೂರು, ಅ.5: ನಗರದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯುಳ್ಳ 40 ಸ್ಥಳಗಳನ್ನು ಗುರುತಿಸಿರುವ ಪೊಲೀಸ್ ಇಲಾಖೆ, ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯವಿರುವ ಸಲಹೆ-ಸೂಚನೆ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಂಚಾರಕ್ಕೆ ಅಡಚಣೆಯುಂಟಾಗುತ್ತಿರುವ ಸಿಲ್ಕ್ ಬೋರ್ಡ್ ಜಂಕ್ಷನ್, ಕೃಪಾನಿಧಿ ಕಾಲೇಜು ಜಂಕ್ಷನ್, ಕೆಆರ್ ಮಾರುಕಟ್ಟೆ ಜಂಕ್ಷನ್, ಟ್ರಿನಿಟಿ ವೃತ್ತ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್, ಯಲಹಂಕ ಬೈಪಾಸ್, ಮೇಖ್ರಿ ವೃತ್ತ ಜಂಕ್ಷನ್‌ಗಳಂತಹ ಸಂಚಾರ ದಟ್ಟಣೆ ಪ್ರದೇಶಗಳನ್ನೂ ಸೇರಿದಂತೆ ಒಟ್ಟು 40 ಸಂಚಾರ ದಟ್ಟಣೆ ಪ್ರದೇಶಗಳನ್ನು ಪೊಲೀಸ್ ಇಲಾಖೆ ಪಟ್ಟಿ ಮಾಡಿ ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕರ ಸಲಹೆ- ಸೂಚನೆ ಕೋರಿದೆ.

ವಾಹನ ದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಂಚಾರ ದಟ್ಟಣೆ ನಿವಾರಣೆಗೆ ನೆರವಿಗೆ ಬರಬೇಕಿದೆ. ಈ ಸಂಬಂಧ ಅಗತ್ಯ ಸಲಹೆಗಳನ್ನು ಇ-ಮೇಲ್, ವಾಟ್ಸ್ ಆ್ಯಪ್, ಎಸ್‌ಎಂಎಸ್, ಟ್ವೀಟ್ ಅಥವಾ ಫೇಸ್‌ಬುಕ್‌ಗಳ ಮೂಲಕ ಸಾರ್ವಜನಿಕರಿಂದ ನಿರೀಕ್ಷಿಸಲಾಗುತ್ತಿದೆ ಎಂದು ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

ಪೊಲೀಸ್ ಆಯುಕ್ತರ ಟ್ವೀಟ್‌ಗೆ ಉತ್ತರಿಸಿರುವ ಕೆಲ ಸಾರ್ವಜನಿಕರು, ಎಲ್ಲೆಂದರಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು ನಿಲುಗಡೆಯಾಗುತ್ತಿರುವುದರಿಂದ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್ ಬಳಿ 4 ಪಥದ ರಸ್ತೆಯನ್ನು ಏಕಾಏಕಿ 2 ಪಥದ ರಸ್ತೆಯನ್ನಾಗಿ ಪರಿವರ್ತಿಸಿರುವುದು ಸಂಚಾರ ದಟ್ಟಣೆಗೆ ಕಾರಣವಾದರೆ, ತುಮಕೂರು ರಸ್ತೆಯಲ್ಲಿ ಸಿಗ್ನಲ್ ಬಳಿ ಕೆಎಸ್ಸಾರ್ಟಿಸಿ ಬಸ್‌ಗಳ ನಿಲುಗಡೆ ಮಾಡುತ್ತಿರುವುದು ಸಂಚಾರ ದಟ್ಟಣೆಗೆ ಮತ್ತೊಂದು ಕಾರಣ ಎಂದಿದ್ದಾರೆ. ಹೀಗೆ ಸಾರ್ವಜನಿಕರಿಂದ ಹಲು ಸಲಹೆ ಸೂಚನೆಗಳು ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News