ಕರ್ನಾಟಕ ಹೈಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳ ನೇಮಕ: ಕೇಂದ್ರದ ಆದೇಶ ಧಿಕ್ಕರಿಸಿದ ಕೊಲಿಜಿಯಂ

Update: 2019-10-06 04:32 GMT

ಹೊಸದಿಲ್ಲಿ, ಅ.6: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಾಲ್ವರು ವಕೀಲರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರ ನೀಡಿದ ಸೂಚನೆಯನ್ನು ಕೊಲಿಜಿಯಂ ಧಿಕ್ಕರಿಸಿದೆ.

ಕೊಲಿಜಿಯಂ ಶಿಫಾರಸು ಮಾಡಿದ್ದ ನಾಲ್ವರು ವಕೀಲರ ಪೈಕಿ ಒಬ್ಬರು ಭೂಮಾಫಿಯಾ ಮತ್ತು ಭೂಗತ ಜಗತ್ತಿನ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಾಲ್ವರ ನೇಮಕಾತಿ ಶಿಫಾರಸನ್ನು ವಾಪಸ್ ಪಡೆಯುವಂತೆ ಸರ್ಕಾರ ಸೂಚಿಸಿತ್ತು. ಆದರೆ ಇದನ್ನು ಧಿಕ್ಕರಿಸಿದ ಕೊಲಿಜಿಯಂ, ತನ್ನ ಹಿಂದಿನ ಶಿಫಾರಸಿಗೆ ಬದ್ಧ ಎಂದು ಸ್ಪಷ್ಟಪಡಿಸಿದೆ.

ವಕೀಲರ ವಿರುದ್ಧ ಇರುವ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ; ಆದ್ದರಿಂದ ಅದನ್ನು ಸಮರ್ಥಿಸಲಾಗದು ಎಂದು ಕೊಲಿಜಿಯಂ ಹೇಳಿದೆ. ನ್ಯಾಯಾಡಳಿತ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಸಲ್ಲದು ಹಾಗೂ ಇಂಥ ಹಸ್ತಕ್ಷೇಪ ನ್ಯಾಯಾಂಗದ ರೂಢಿಗೆ ಒಗ್ಗುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೊಲಿಜಿಯಂ ನಿರ್ಧಾರ ವಿಶೇಷ ಮಹತ್ವ ಪಡೆದಿದೆ.

ಎ.ಎ.ಖುರೇಶಿಯವರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸಿಗೆ ಕೇಂದ್ರ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಈ ಕುರಿತು ಸಲ್ಲಿಸಿದ್ದ ಅರ್ಜಿಯ ವೇಳೆ ಸುಪ್ರೀಂಕೋರ್ಟ್ ಕೇಂದ್ರದ ವಿರುದ್ಧ ಗರಂ ಆಗಿತ್ತು. ನ್ಯಾಯಾಂಗ ನೇಮಕಾತಿ ಮತ್ತು ವರ್ಗಾವಣೆಗಳು ನ್ಯಾಯದಾನ ವ್ಯವಸ್ಥೆಯ ಮೂಲಕ್ಕೆ ಹೋಗುತ್ತವೆ ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದರು. ನ್ಯಾಯಮೂರ್ತಿ ಖುರೇಶಿ ಪ್ರಕರಣ ಇನ್ನೂ ಬಾಕಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News