ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ತೀರ್ಮಾನ ಸಂವಿಧಾನದ ಆಶಯಕ್ಕೆ ವಿರುದ್ಧ - ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2019-10-07 10:46 GMT

ಬೆಂಗಳೂರು, ಅ. 7: ‘ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರಕಾರದ ತೀರ್ಮಾನ ವಿಶ್ವಸಂಸ್ಥೆಯ ಮಕ್ಕಳ ಒಡಂಬಡಿಕೆ ಹಾಗು ಭಾರತದ ಸಂವಿಧಾನದ 39(ಎಫ್)ಅನ್ವಯ ಮಕ್ಕಳ ಉತ್ತಮ ಹಿತಾಶಕ್ತಿ ಹಾಗೂ ಆರೋಗ್ಯಕರ ರೀತಿಯಲ್ಲಿ ಮಕ್ಕಳ ಬೆಳವಣಿಗೆಯ ಮೂಲತತ್ವಗಳನ್ನು ಉಲ್ಲಂಘಿಸುತ್ತವೆ’ ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಕಲಿಕೆಗಿಂತ ಹೆಚ್ಚು ಪರೀಕ್ಷೆಗೆ ಒತ್ತು ನೀಡುತ್ತಿದ್ದೇವೆ. ಆದರೆ ನಿಜವಾಗಲೂ ಆಗಬೇಕಾಗಿರುವುದು ಪರೀಕ್ಷೆಯಲ್ಲ. ಉತ್ತಮ ಕಲಿಕೆಗೆ ಎಲ್ಲ ರೀತಿಯ ಉತ್ತಮ ವಾತಾವರಣ. ಸರಿಯಾದ ಮೂಲಭೂತ ಸೌಕರ್ಯ ತರಗತಿವಾರು ವಿಷಯವಾರು ಶಿಕ್ಷಕರಿದ್ದು ಪ್ರತಿದಿನ ಕನಿಷ್ಠ 5-6 ಗಂಟೆ ಉತ್ತಮ ಕಲಿಕಾ ಚಟುವಟಿಕೆಗಳ ಮೂಲಕ ಪಾಠ ಮಾಡುವಂತಾದರೆ ಮಕ್ಕಳು ಏಕೆ ಕಲಿಯುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಕಲಿಸದೇ ಫೇಲ್(ಅನುತ್ತೀರ್ಣ) ಮಾಡುವುದು ಸುಲಭ. ಆದರೆ, ಫೇಲ್ ಆಗದಂತೆ ಕಲಿಸುವುದು ಕಷ್ಟ. ನಮ್ಮ ಆಯ್ಕೆ ಎರಡನೆಯದಾಗಿರುವುದು ದುರಾದೃಷ್ಟ. ಇಲ್ಲಿ ನಿಜವಾಗಲೂ ಫೇಲ್ ಆಗುವುದು ಮಕ್ಕಳಲ್ಲ. ಶಿಕ್ಷಕರು ಮತ್ತು ಈ ವ್ಯವಸ್ಥೆ. ವ್ಯವಸ್ಥೆಯ ದೋಷಕ್ಕೆ ಮಕ್ಕಳನ್ನು ಬಲಿಪಶು ಮಾಡುತ್ತಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.

ಫೇಲ್ ಮಾಡುವ ಪರಿಣಾಮ ಮಕ್ಕಳು ‘ಫೇಲ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಶಾಲೆ ಬಿಡುತ್ತವೆ. ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಅದೇ ತರಗತಿಯಲ್ಲಿ ಸಹಪಾಠಿಗಳ ಅಪಹಾಸ್ಯಕ್ಕೆ ಗುರಿಯಾಗಿ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತವೆ. ನಮ್ಮ ದುರಾದೃಷ್ಟ ನಾವು ಹಳೆ ಸಂಪ್ರದಾಯ ವಾದಿ ರೀತಿಯಲ್ಲೇ ಯೋಚಿಸುತ್ತಿದ್ದೇವೆ.

ಮಕ್ಕಳ ಹಿತಾಶಕ್ತಿ ಮತ್ತು ಗೌರವಾನ್ವಿತ ಬದುಕಿನ ಹೊಸ ಅಯ್ಯಮಗಳ ಮೂಲಕ ಆಲೋಚನೆ ಮಾಡುವ ಶಕ್ತಿ ಇಲ್ಲದೆ. ನಿಂತ ನೀರಾಗಿ ಮುಂದೆ ಹೋಗಲಾಗುತ್ತಿಲ್ಲ. ಈ ಪರೀಕ್ಷೆ ಮಾಡುವ ತೀರ್ಮಾನವನ್ನು ಕೈಬಿಟ್ಟು ನಿರಂತರ ಮೌಲ್ಯಮಾಪನದ ಮೂಲಕ ಪ್ರತಿಯೊಂದು ಮಗು ನಿಗದಿತ ಕಲಿಕಾಮಟ್ಟ ತಲುಪಲು ಅಗತ್ಯವಾಗಿ ಆಗಲೇಬೇಕಾದ ಕಲಿಕಾ ಪ್ರಕ್ರಿಯೆ ನಡೆಯುವಂತೆ ಸರಕಾರ ಕಾರ್ಯಕ್ರಮ ರೂಪಿಸಬೇಕೆಂದು ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News