ಸರಕಾರವನ್ನು ಪ್ರಶ್ನಿಸುವುದು ಗಾಂಧಿ ಚಳವಳಿಯ ಭಾಗ: ರಾಮಚಂದ್ರ ಗುಹಾ

Update: 2019-10-08 13:15 GMT

ಬೆಂಗಳೂರು, ಅ.8: ಜನತೆಯ ಒಳಿತಿಗಾಗಿ ಸರಕಾರವನ್ನು ಪ್ರಶ್ನಿಸುವುದು ಗಾಂಧಿ ಚಳವಳಿಯ ಮುಂದುವರೆದ ಭಾಗವಾಗಿದೆ ಎಂದು ಹಿರಿಯ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅಭಿಪ್ರಾಯಿಸಿದ್ದಾರೆ.

ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ನಗರದ ವಲಭನಿಕೇತನದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಮಾತನಾಡಿದ ಅವರು, ನಾಗರಿಕ ಸಮಾಜವು ಸದಾ ಜನರ ಪರವಾಗಿ ಪ್ರಭುತ್ವವನ್ನು ಪ್ರಶ್ನಿಸುವಂತಹ ವಾತಾವರಣವನ್ನು ರೂಪಿಸುವುದು ಅಗತ್ಯವಾಗಿದೆ ಎಂದರು.

ಗಾಂಧೀ ಚಳವಳಿಯನ್ನು ಮುಖ್ಯವಾಗಿ ರಾಜಕೀಯ ಹಾಗೂ ಸಾಮಾಜಿಕವಾಗಿ ನೋಡಬೇಕಿದೆ. ರಾಜಕೀಯವಾಗಿ ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಮೂಲಕ ಸಮಾಜವನ್ನು ಪ್ರಭಾವಿಸಿದ್ದು ಹಾಗೂ ವಿನೋಬಾಭಾವೆಯ ಭೂ ದಾನ ಚಳವಳಿ ಸಮಾಜದಲ್ಲಿ ಸಾಕಷ್ಟು ಸಂಚಲನವನ್ನು ಉಂಟು ಮಾಡಿದ್ದನ್ನು ನಾವು ಗಮನಿಸಬೇಕಿದೆ ಎಂದು ಅವರು ಹೇಳಿದರು.

ಈಗ ರಂಗಕರ್ಮಿ ಪ್ರಸನ್ನ ಪವಿತ್ರ ಆರ್ಥಿಕತೆಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಅಗತ್ಯವಾದುದ್ದಾಗಿದೆ. ಬಂಡವಾಳಶಾಹಿ ಆರ್ಥಿಕತೆಯಿಂದ ಇವತ್ತು ನಿರುದ್ಯೋಗ ಹಾಗೂ ಪರಿಸರಕ್ಕೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಹೀಗಾಗಿ ಕೈಕಸುಬುಗಳು, ಗುಡಿ ಕೈಗಾರಿಕೆಗಳು ಹಾಗೂ ನೈಸರ್ಗಿಕ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಅದಕ್ಕಾಗಿ ಚಳವಳಿ ರೂಪಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದರು.

ಹಿರಿಯ ಗಾಂಧಿವಾದಿ ಜೆ.ಸಿ.ಕುಮಾರಪ್ಪ, ಗಾಂಧೀಜಿಯ ಅರ್ಥಶಾಸ್ತ್ರವನ್ನು ಪ್ರಯೋಗ ಮತ್ತು ಫಲಿತಾಂಶಗಳ ಮೂಲಕ ಜಾರಿಗೆ ತಂದವರಾಗಿದ್ದಾರೆ. ಗಾಂಧೀಜಿಯ ಚಿಂತನೆಗಳಿಗೆ ಮೂರ್ತ ಸ್ವರೂಪ ನೀಡುವುದರ ಮೂಲಕ ಅರ್ಥಶಾಸ್ತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದರು. ಹಿರಿಯ ರಂಗಕರ್ಮಿ ಪ್ರಸನ್ನ ಅದೇ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News