ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ ಸಂಗ್ರಹವಾದ ದಂಡ ಎಷ್ಟು ಕೋಟಿ ಗೊತ್ತೇ?

Update: 2019-10-08 13:49 GMT

ಬೆಂಗಳೂರು, ಅ.8 ನಾನಾ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಎಂಟು ತಿಂಗಳ ಅವಧಿಯಲ್ಲಿ 65.46 ಲಕ್ಷ ಕೇಸ್ ದಾಖಲಿಸಿರುವ ನಗರ ಸಂಚಾರ ಪೊಲೀಸರು, 57.60 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. 2019ರ ಜುಲೈನಲ್ಲಿ ಅತಿ ಹೆಚ್ಚು (5 ಲಕ್ಷ) ಕೇಸುಗಳನ್ನು ದಾಖಲಿಸಿದ್ದು, ಫೆಬ್ರವರಿ ತಿಂಗಳಲ್ಲಿ ಅತಿ ಕಡಿಮೆ(2.70 ಲಕ್ಷ) ಕೇಸ್ ದಾಖಲಿಸಿದ್ದಾರೆ. 

ಭಾರತೀಯ ಮೋಟಾರು ವಾಹನ ಕಾಯ್ದೆ (ಐಎಂವಿ) ಅಡಿ 32.46 ಲಕ್ಷ ಕೇಸ್ ದಾಖಲಿಸಿದ್ದು 52.29 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆಯಡಿ 949 ಕೇಸ್ ದಾಖಲಿಸಿ 73,300 ರೂ. ದಂಡ, ವಾಹನ ಟೋಯಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ 49,751 ಕೇಸ್ ದಾಖಲಿಸಿ, 4 ಕೋಟಿ ರೂ. ಹಾಗೂ ನಿಯಮ ಉಲ್ಲಂಘನೆ ಸಂಬಂಧ ವಿವಿಧ ಸಿಗ್ನಲ್, ಜಂಕ್ಷನ್‌ಗಳಲ್ಲಿರುವ ಸಿಸಿ ಕ್ಯಾಮೆರಾಗಳ ಪರಿಶೀಲನೆಯಿಂದ 32.48 ಲಕ್ಷ ಕೇಸ್ ದಾಖಲಿಸಿ, 1.22 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ರಸ್ತೆ ಸುರಕ್ಷತೆ, ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರಕಾರ ಜೂನ್ ತಿಂಗಳ ಕೊನೆ ವಾರದಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಿತ್ತು. ಅದಾದ ಬಳಿಕ ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು, 20ಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಶುಲ್ಕ ಹೆಚ್ಚಿಸಿತ್ತು.

ಒಂದೇ ದಿನಕ್ಕೆ 33.37 ಲಕ್ಷ ರೂ. ದಂಡ ವಸೂಲಿ
ಸಾಲು ಸಲಾಗಿ ರಜೆ ಇದ್ದರೂ, ವಾಹನ ಸವಾರರ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರ ತಗ್ಗಿಲ್ಲ. ಕೇವಲ ಒಂದೇ ದಿನದಲ್ಲೇ ಬರೋಬ್ಬರಿ 15 ಸಾವಿರ ಪ್ರಕರಣಗಳನ್ನು ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಅ.7ರಂದು ಸಂಚಾರಿ ಪೊಲೀಸರು ನಗರದಾದ್ಯಂತ ಸುಮಾರು 15,055 ಪ್ರಕರಣ ದಾಖಲಿಸಿ 33.37 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ 16 ಮಂದಿ ಸಿಕ್ಕಿಬಿದ್ದಿದ್ದು, ಅವರಿಗೆ ನ್ಯಾಯಾಲಯದಲ್ಲಿ ದಂಡ ಕಟ್ಟಲು ಪೊಲೀಸರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಪ್ರಮುಖವಾಗಿ ಹೆಲ್ಮೆಟ್ ರಹಿತ ವಾಹನ ಚಾಲನೆಯೇ ಹೆಚ್ಚಾಗಿವೆ. 2,831 ಹೆಲ್ಮೆಟ್ ರಹಿತ ಸವಾರರಿಗೆ 6,12,400 ರೂ. ದಂಡ ವಿಧಿಸಿದ್ದು, ಹೆಲ್ಮೆಟ್ ಇಲ್ಲದ 1891 ಹಿಂಬದಿ ಸವಾರರಿಗೆ 5,79,700ರೂ. ದಂಡ ಹಾಕಲಾಗಿದೆ. ಅದೇ ರೀತಿ, ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 33,37,100 ರೂ. ದಂಡ ವಿಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News