ಸುಪ್ರೀಂ ಕೋರ್ಟ್ ನ್ಯಾಯ ಎತ್ತಿ ಹಿಡಿಯಲಿ: 49 ಗಣ್ಯರ ವಿರುದ್ಧದ ಎಫ್ಐರ್ ಗೆ ಕಮಲ್ ಹಾಸನ್ ಪ್ರತಿಕ್ರಿಯೆ

Update: 2019-10-08 15:23 GMT

 ಚೆನ್ನೈ, ಅ. 8: ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದ 49 ಮಂದಿ ಗಣ್ಯರ ವಿರುದ್ಧ ದಾಖಲಿಸಲಾದ ಪ್ರಥಮ ಮಾಹಿತಿ ವರದಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಆಗ್ರಹಿಸಿದ್ದಾರೆ.

 “ಪ್ರಧಾನಿ ನರೇಂದ್ರ ಮೋದಿ ಅವರು ಸಾಮರಸ್ಯ ಭಾರತವನ್ನು ಬಯ ಸಿದ್ದಾರೆ. ಸಂಸತ್ತಿನಲ್ಲಿ ಅವರ ಹೇಳಿಕೆ ಇದನ್ನು ದೃಢಪಡಿಸಿದೆ. ರಾಜ್ಯ ಮತ್ತು ಕಾನೂನು ಅದನ್ನು ಪತ್ರದಲ್ಲಿ ಮಾತ್ರ ಅನುಸರಿಸುವುದಲ್ಲ. ಬದಲಾಗಿ ಕಾರ್ಯರೂಪಕ್ಕೆ ತರಬೇಕು. ಪ್ರಧಾನಿ ಅವರ ಆಕಾಂಕ್ಷೆಗೆ ವಿರುದ್ಧವಾಗಿ 49 ಮಂದಿ ಗಣ್ಯರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ” ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

“ಸುಪ್ರೀಂ ಕೋರ್ಟ್ ನ್ಯಾಯದೊಂದಿಗೆ ಪ್ರಜಾಪ್ರಭುತ್ವವವನ್ನು ಎತ್ತಿ ಹಿಡಿಯಬೇಕು ಹಾಗೂ 49 ಗಣ್ಯರ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ ವರದಿ ರದ್ದುಗೊಳಿಸಬೇಕು ಎಂದು ಓರ್ವ ಪ್ರಜೆಯಾಗಿ ನಾನು ಮನವಿ ಮಾಡುತ್ತೇನೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಇತಿಹಾಸಕಾರ ರಾಮಚಂದ್ರ ಗುಹಾ, ಚಿತ್ರನಿರ್ದೇಶಕ ಅಪರ್ಣಾ ಸೇನ್ ಹಾಗೂ ಮಣಿರತ್ನಂ ಸೇರಿದಂತೆ 49 ಮಂದಿ ಗಣ್ಯರು, ಕಲಾವಿದರು ಹಾಗೂ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು.

ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈಯುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಬಹಿರಂಗ ಪತ್ರದಲ್ಲಿ ಹೇಳಲಾಗಿತ್ತು. ಅಲ್ಲದೆ, ಭಿನ್ನಮತ ಇಲ್ಲದೆ ಪ್ರಜಾಪ್ರಭುತ್ವ ಇಲ್ಲ ಎಂದು ಪ್ರತಿಪಾದಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News