ಜ್ಞಾನ ಸಂಪತ್ತನ್ನು ದೇಶದ ಅಭಿವೃದ್ಧಿಗೆ ಅರ್ಪಿಸಿ: ಪ್ರೊ.ಗೀತಾ ಬಾಲಿ

Update: 2019-10-08 17:20 GMT

ಬೆಂಗಳೂರು, ಅ.8: ಜ್ಞಾನ ಎಂಬ ಸಂಪತ್ತನ್ನು ದೇಶದ ಅಭಿವೃದ್ಧಿಗೆ ಅರ್ಪಿಸಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ ತಿಳಿಸಿದರು.

ನಗರದ ಜ್ಞಾನಭಾರತಿ ವಿವಿ ಆವರಣದ ಪ್ರೊ.ವೆಂಕಟಗಿರಿ ಗೌಡ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವ ವಿಜ್ಞ್ಞಾನ ವಿಭಾಗ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ ಏರ್ಪಡಿಸಿದ್ದ, ವಿಭಾಗದ ರಜತ ಮಹೋತ್ಸವ ಮತ್ತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪದೇ ಪದೇ ಒಂದೇ ರೀತಿಯ ಜ್ಞಾನವನ್ನು ಉತ್ಪಾದಿಸುವ ಬದಲು ಬಹುಶಿಸ್ತಿನ ಆಯಾಮದಲ್ಲಿ ನಿಂತು ಹೊಸ ಪ್ರಕಾರದ ಜ್ಞಾನವನ್ನು ಉತ್ಪಾದಿಸಬೇಕಿದೆ ಎಂದು ಸಂಶೋಧನ ವಿದ್ಯಾರ್ಥಿಗಳಿಗೆ ಅವರು ತಿಳಿಸಿದರು.

ಬೆಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಬ್ರಿಟೀಷರು ಸೇರಿದಂತೆ ಹಲವಾರು ದೇಶದ ರಾಜರುಗಳು ಈ ದೇಶದ ಮೇಲೆ ದಾಳಿ ನಡೆಸಿರುವುದೇ ಇಲ್ಲಿನ ವೈವಿಧ್ಯಮಯ ಸಂಪತ್ತಿಗಾಗಿ. ದೇಶದಲ್ಲಿ ಉತ್ಪಾದನಾ ಸಮತೋಲನದ ಅಗತ್ಯವಿದೆ. ರೈತರು ಮಾಹಿತಿ ಕೊರತೆಯಿಂದಾಗಿ ಒಂದೇ ಉತ್ಪನ್ನವನ್ನು ಹೇರಳವಾಗಿ ಬೆಳೆಯುವ ಮೂಲಕ ಕನಿಷ್ಠ ಬೆಲೆ ವಂಚಿತರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಂಶೋಧನ ವಿದ್ಯಾರ್ಥಿಗಳು ರಚಿಸುವಂತಹ ಸಂಶೋಧನ ಗ್ರಂಥಗಳು ದೇಶದ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾದ ಆಕರಗಳಾಗಬೇಕಿದೆ. ಶಿಕ್ಷಕರು ಆ ನಿಟ್ಟಿನಲ್ಲಿ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕಿದೆ. ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಶಿಕ್ಷಕರ ಕೊರತೆ ಇದೆ. ಅದಷ್ಟು ಬೇಗ ಅಗತ್ಯವಿರುವ ಖಾಲಿ ಹುದ್ದೆಗಳನ್ನು ಈ ವರ್ಷದ ಕೊನೆಯೊಳಗೆ ಭರ್ತಿ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಚಾರ ಸಂಕಿರಣದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ನಿರಂಜನ್, ಹಿರಿಯ ಸಂಶೋಧಕ ಡಾ.ಅಯ್ಯಪ್ಪ, ಪ್ರೊ.ಸುಳ್ಯಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News