ಉಪ ನಗರ ರೈಲು ಯೋಜನೆಗೆ ಅನುದಾನ ಬಿಡುಗಡೆ ಅನುಮಾನ

Update: 2019-10-08 17:32 GMT

ಬೆಂಗಳೂರು, ಅ.8: ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಗಾಗಿ ಬರುವ ಬಜೆಟ್‌ನಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆ ಆಗುವುದು ಅನುಮಾನ ಎಂದು ಅಂದಾಜಿಸಲಾಗುತ್ತಿದೆ.

ಇದುವರೆಗೂ ಉಪ ನಗರ ರೈಲು ಯೋಜನೆಗೆ ಅನುಮೋದನೆ ಸಿಕ್ಕಿಲ್ಲ. ಆದುದರಿಂದಾಗಿ ಹಿಂದಿನ ಬಜೆಟ್‌ನಲ್ಲಿಯೇ ಮೀಸಲಿಟ್ಟ ಅನುದಾನವೂ ಬಳಕೆಯಾಗಿಲ್ಲ. ಹಣ ಮೀಸಲಿಟ್ಟರೂ, ಯೋಜನೆಗೆ ಅನುಮೋದನೆ ನೀಡುವಲ್ಲಿ ಸರಕಾರ ಎಡವಿದೆ. ಈ ಹಿನ್ನೆಲೆಯಲ್ಲಿ ಅನುಮೋದನೆ ಆಗುವವರೆಗೂ ಅನುಷ್ಠಾನ ಹೊಣೆ ಹೊತ್ತ ಕೆ-ರೈಡ್‌ಗೆ ಯಾವುದೇ ಕೆಲಸವಿರುವುದಿಲ್ಲ.

ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ರಚನೆಯೂ ಆಗುವಂತಿಲ್ಲ. ಉಳಿದ ಮೂರು-ನಾಲ್ಕು ತಿಂಗಳಲ್ಲಿ ಕೊಟ್ಟ ಹಣ ಖರ್ಚು ಮಾಡುವುದು ಕಷ್ಟ. ಇನ್ನು ಖರ್ಚಾಗದಿದ್ದರೆ, ಹೊಸದಾಗಿ ಕೊಡುವುದು ಅನುಮಾನ. ಇದರಿಂದ ಪರೋಕ್ಷವಾಗಿ ಯೋಜನೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ನಗರದ ಮೇಲೆ ಹೆಚ್ಚುತ್ತಿರುವ ಸಂಚಾರದಟ್ಟಣೆ ಒತ್ತಡ ತಗ್ಗಿಸುವ ಉದ್ದೇಶದಿಂದ ಉಪನಗರ ರೈಲು ಯೋಜನೆ ಪ್ರಕಟಿಸಲಾಯಿತು. ಇದಕ್ಕೆ 2018-19ನೇ ಸಾಲಿನ ಬಜೆಟ್‌ನಲ್ಲಿ ಒಂದು ಕೋಟಿ ರೂ. ನೀಡಲಾಯಿತು. 2019-20ರಲ್ಲಿ ಈ ಮೊತ್ತವನ್ನು ಹತ್ತುಪಟ್ಟು ಅಂದರೆ ಹತ್ತು ಕೋಟಿಗೆ ಹೆಚ್ಚಿಸಲಾಯಿತು.

ಅಲ್ಲದೆ, ಪ್ರಾದೇಶಿಕ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಉಪನಗರ ರೈಲು ಸೇವೆಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಉಪನಗರ ರೈಲು ವ್ಯವಸ್ಥೆಗೆ ಇನ್ನಷ್ಟು ಬಂಡವಾಳವನ್ನು ಆದ್ಯತೆ ಮೇರೆಗೆ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಆದರೆ, ಕಳೆದ ಎಂಟು ತಿಂಗಳಾದರೂ ಯೋಜನೆಗೆ ಅನುಮೋದನೆ ದೊರಕಿಲ್ಲ.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಮತ್ತೊಂದು ಬಜೆಟ್ ಮಂಡಿಸಲಿದೆ. ಅಷ್ಟರಲ್ಲಿ ಯೋಜನೆ ಅನುಮೋದನೆ ಪಡೆದು, ಟೆಂಡರ್ ಪೂರ್ಣಗೊಳಿಸಿ, ಹಣ ಖರ್ಚು ಮಾಡುವುದು ಸವಾಲಿನ ಕೆಲಸವಾಗಿದೆ. ಹಿಂದೆ ನೀಡಿದ ಅನುದಾನ ಖರ್ಚಾಗದಿದ್ದಲ್ಲಿ ಸಹಜವಾಗಿ ಸರಕಾರ ಹಣ ನೀಡಲು ಹಿಂದೇಟು ಹಾಕುವ ಸಾಧ್ಯತೆಯಿದೆ.

161 ಕಿ.ಮೀ. ಉಪನಗರ ರೈಲು ಯೋಜನೆ ಸೇರಿದಂತೆ ಒಟ್ಟಾರೆ ಅಂದಾಜು 280 ಕಿ.ಮೀ. ಮಾರ್ಗ ನಿರ್ಮಿಸುವ ಹೊಣೆ ಕೆ.ರೈಡ್ ಸಂಸ್ಥೆ ಹೊತ್ತಿದೆ. ಅಲ್ಲದೆ, ಈಚೆಗೆ ಮಂಜೂರಾದ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗವನ್ನೂ ಇದೇ ಸಂಸ್ಥೆಗೆ ವಹಿಸಲಾಗಿದೆ. ಇದೆಲ್ಲದಕ್ಕೂ ತಜ್ಞರ ಪ್ರಕಾರ ಸಿಗ್ನಲಿಂಗ್, ವಿದ್ಯುತ್ ಮಾರ್ಗ ಅಳವಡಿಕೆ ಒಳಗೊಂಡಂತೆ ವಿವಿಧ ಕೆಲಸಗಳಿಗಾಗಿ ಕನಿಷ್ಠ 15ರಿಂದ 20 ಮಂದಿ ಅಧಿಕಾರಿ ವರ್ಗದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News