ಬಿಬಿಎಂಪಿ ಉಪ ಮೇಯರ್ ಗೆ ದುಬಾರಿ ಕಾರು ಖರೀದಿ

Update: 2019-10-08 17:47 GMT

ಬೆಂಗಳೂರು, ಅ.8: ಬಿಬಿಎಂಪಿ ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾದ ಕೂಡಲೇ ರಾಮಮೋಹನ್ ರಾಜುಗೆ ಸರಿಸುಮಾರು 26 ಲಕ್ಷ ರೂ. ಮೌಲ್ಯದ ದುಬಾರಿ ಇನ್ನೋವಾ ಕಾರು ಖರೀದಿಸಿ ನೀಡಲಾಗಿದೆ.

ಬಿಬಿಎಂಪಿ ಈಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ವೇಳೆಯಲ್ಲಿ ಉಪಮೇಯರ್‌ಗೆ ದುಬಾರಿ ಕಾರು ಖರೀದಿ ಮಾಡುವ ಅಗತ್ಯವಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದ್ದು, ಅಧಿಕಾರ ವಹಿಸಿಕೊಂಡ ಬಳಿಕ ಪೂಜೆ, ಹೋಮ ಹವನ ನಡೆಸಿದ ನಂತರ ದುಬಾರಿ ಕಾರಿನಲ್ಲಿ ಪ್ರಯಾಣಿಸಿರುವುದು ಟೀಕೆಗೆ ಗುರಿಯಾಗಿದೆ.

ಈ ಹಿಂದೆ 2012 ರಲ್ಲಿ ಆಯುಕ್ತರು ಹಾಗೂ ಉಪಮೇಯರ್‌ಗಾಗಿ ಕಾರುಗಳನ್ನು ಖರೀದಿಸಲಾಗಿತ್ತು. ಇವು ಹಳೆಯದಾಗಿದ್ದರಿಂದ ಹೊಸ ಎರಡು ಕಾರುಗಳನ್ನು ಖರೀದಿಸಲು 2018-19 ನೇ ಸಾಲಿನ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿತ್ತು. ಚುನಾವಣೆ ಮುಗಿದು ಆಯ್ಕೆಯಾದ ಕೂಡಲೇ ಮೀಸಲಿಟ್ಟ ಹಣವನ್ನು ಬಳಸಿಕೊಂಡು ಹೊಸ ಕಾರುಗಳನ್ನು ಖರೀದಿ ಮಾಡಲಾಗಿದೆ.

ಮೂರು ವರ್ಷದ ಹಿಂದೆ ಪದ್ಮಾವತಿ ಮೇಯರ್ ಆಗಿದ್ದಾಗ ಹೊಸ ಇನೋವಾ ಖರೀದಿಸಲಾಗಿತ್ತು. ಈಗ ನೂತನ ಮೇಯರ್ ಗೌತಮ್ ಕುಮಾರ್ ಅದೇಕಾರು ಬಳಕೆ ಮಾಡುತ್ತಿದ್ದಾರೆ.

ಬಿಬಿಎಂಪಿಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಆಸ್ತಿಗಳನ್ನು ಅಡಮಾನ ಇಡಲಾಗಿತ್ತು. ಇತ್ತಿಚೆಗೆ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸಿ ಆರ್ಥಿಕ ಶಿಸ್ತು ತರುವ ಪ್ರಯತ್ನ ನಡೆದಿದೆ. ಜತೆಗೆ ಅಡಮಾನ ಇಟ್ಟಿದ್ದ ಆಸ್ತಿಗಳನ್ನು ಬಿಡಿಸಿಕೊಳ್ಳಲಾಗಿದೆ. ಇಂತಹ ಆರ್ಥಿಕ ಚೇತರಿಕೆ ಸಮಯದಲ್ಲಿ ದುಬಾರಿ ಕಾರು ಖರೀದಿಸುವ ಮೂಲಕ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹಾಳುಗೆಡವಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News