ಬೆಂಗಳೂರಿನಲ್ಲೂ ಸಿಎನ್‌ಜಿ ಕಡ್ಡಾಯ ಶೀಘ್ರ: ಶಾಸಕ ಶಿವಣ್ಣ

Update: 2019-10-08 17:57 GMT

ಬೆಂಗಳೂರು, ಅ.8: ಸಿಎನ್‌ಜಿ(ನೈಸರ್ಗಿಕ ಅನಿಲ) ಪರಿಸರ ಸ್ನೇಹಿಯಾಗಿದ್ದು, ಹೆಚ್ಚುತ್ತಿರುವ ಮಾಲಿನ್ಯ ಯುಗದಲ್ಲಿ ಪರ್ಯಾಯ ಇಂಧನ ಬಳಕೆ ಅತ್ಯಂತ ಅಗತ್ಯವಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ದೆಹಲಿಯಲ್ಲಿ ಸಿಎನ್‌ಜಿಯನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಸಿಎನ್‌ಜಿ ಕಡ್ಡಾಯಗೊಳಿಸುವ ಕಾಲ ದೂರವಿಲ್ಲವೆಂದು ಶಾಸಕ ಶಿವಣ್ಣ ತಿಳಿಸಿದ್ದಾರೆ.

ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್‌ನಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಸುಸಜ್ಜಿತ ಪರಿಸರ ಸ್ನೇಹಿ ನೈಸರ್ಗಿಕ ಅನಿಲ ಸಿಎನ್‌ಜಿ ಘಟಕ ಹಾಗೂ ಪರಿಸರ ಸ್ನೇಹಿ ಸಿಎನ್‌ಜಿ ವಾಹನವಾಗಿ ಪರಿವರ್ತಿಸುವ ಆಧುನಿಕ ಸಿಎನ್‌ಜಿ ಫಿಟ್‌ಮೆಂಟ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿ 1.3 ಕೋಟಿ ಜನಸಂಖ್ಯೆಯಿದ್ದು, ಪ್ರತಿನಿತ್ಯ ಸಹಸ್ರಾರು ವಾಹನಗಳು ನೋಂದಣಿಯಾಗುತ್ತಿದ್ದು, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಹೃದ್ರೋಗ, ಕ್ಯಾನ್ಸರ್, ಆಸ್ತಮ ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಸಾಂಪ್ರದಾುಯಿಕ ಇಂಧನದ ಬದಲಿಗೆ ನೈಸರ್ಗಿಕ ಅನಿಲದ ಬಳಕೆಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ನೈಸರ್ಗಿಕ ಅನಿಲ ಬಳಕೆಯಿಂದ ಆರ್ಥಿಕವಾಗಿ ಹೆಚ್ಚು ಲಾಭವಾಗುತ್ತದೆ. ಸಿಎನ್‌ಜಿ ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಹೆಚ್ಚು ಮೈಲೇಜ್ ನೀಡುತ್ತವೆ. ವಾಹನದ ಎಂಜಿನ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಕಡಿಮೆ ನಿರ್ವಹಣಾ ವೆಚ್ಚದಿಂದ ಜನ ಸಾಮಾನ್ಯರಿಗೆ ಸಿ.ಎನ್‌ಜಿ ಆಶಾಕಿರಣವಾಗಿದೆ ಎಂದರು.

ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್, ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಸ್ನೇಹಿ ಮತ್ತು ಇಂಧನ ಮಿತವ್ಯಯ ವಾಹನಗಳನ್ನು ಬಳಸದಿದ್ದರೆ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಗರದ ಜನತೆ ಇದೀಗ ಸಿಎನ್‌ಜಿಯತ್ತ ಪರಿವರ್ತನೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ, ಎಫ್‌ಎಂಎಸ್ ನಿರ್ದೇಶಕಿ ಕಲ್ಪನಾ ನಿತ್ಯಾನಂದ್, ಅಂಬೆರ್ ಕನ್ನಿ ಜಗದೀಶನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News