​ಕಾಶ್ಮೀರ ಸಮಸ್ಯೆ: ಪಾಕಿಸ್ತಾನಕ್ಕೆ ಚೀನಾ ಹೇಳಿದ್ದೇನು ?

Update: 2019-10-09 03:46 GMT

ಬೀಜಿಂಗ್: ಕಾಶ್ಮೀರ ಸಮಸ್ಯೆಯನ್ನು ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಚೀನಾಗೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಅವರಿಗೆ ಸ್ಪಷ್ಟವಾಗಿ ಹೇಳಿದೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸನ್ನದು ಮತ್ತು ಭದ್ರತಾ ಮಂಡಳಿ ನಿರ್ಣಯ ಕುರಿತಂತೆ ತಾನು ಮಾಡಿರುವ ಉಲ್ಲೇಖ ಗಳನ್ನು ಕೈಬಿಟ್ಟಿರುವ ಚೀನಾದ ಈ ನಡೆ ಮಹತ್ವದ ಬದಲಾವಣೆ ಎನಿಸಿದೆ.

"ಉಭಯ ದೇಶಗಳ ಹಿತಾಸಕ್ತಿಗೆ ಪೂರಕವಾಗಿ ಮತ್ತು ವಿಶ್ವದ ಸಾಮಾನ್ಯ ಆಶಯಕ್ಕೆ ಅನುಗುಣವಾಗಿ ಕಾಶ್ಮೀರ ವಿವಾದವೂ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಪರಸ್ಪರ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ನಾವು ಕರೆ ನೀಡುತ್ತೇವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುಂಗ್ ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಾಂಗ್ ಅಕ್ಟೋಬರ್ 11ರಿಂದ 13ರ ವರೆಗೆ ಭಾರತಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಚೀನಾದ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ ಹಾಗೂ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿ ರದ್ದತಿ ಬಳಿಕ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಶಿ ಚೀನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೀನಾ ತಳೆದಿದ್ದ ನಿಲುವಿಗಿಂತ ಭಿನ್ನ ನಿಲುವು ಇದಾಗಿದೆ.

"ವಿಶ್ವಸಂಸ್ಥೆಯ ಸನ್ನದು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳಿಗೆ ಅನುಸಾರವಾಗಿ ಕಾಶ್ಮೀರ ಸಮಸ್ಯೆಯನ್ನು ಸಮರ್ಪಕವಾಗಿ ಮತ್ತು ಶಾಂತಿಯುತವಾಗಿ ದ್ವಿಪಕ್ಷೀಯ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಬೇಕು" ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದರು. ಇದೇ ನಿಲುವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕೂಡಾ ಚೀನಾ ಸ್ಪಷ್ಟಪಡಿಸಿತ್ತು.

ಆದರೆ ಚೀನಾ ಇದೀಗ ಆಗಸ್ಟ್ 5ರ ಪೂರ್ವದ ನಿಲುವಿಗೆ ಬಂದಿದ್ದು, ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News