ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿದ್ದ ಆರೋಪಿ ಹರ್ಯಾಣದ ಶಿವಸೇನೆಯ ಅಭ್ಯರ್ಥಿ

Update: 2019-10-09 16:37 GMT

ಹೊಸದಿಲ್ಲಿ, ಅ.9: ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿದ ಪ್ರಕರಣದ ಆರೋಪಿ ನವೀನ್ ದಲಾಲ್‌ಗೆ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಸೇನೆ ಟಿಕೆಟ್ ನೀಡಿದೆ.

ಅ.21ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನವೀನ್ ದಲಾಲ್ ಹರ್ಯಾಣದ ಬಹಾದ್ದೂರ್‌ಗಢ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ. ಈತ ಸ್ವಯಂ ಘೋಷಿತ ಗೋರಕ್ಷಕನಾಗಿದ್ದು, ಆರು ತಿಂಗಳ ಹಿಂದೆ ಶಿವಸೇನೆಗೆ ಸೇರಿದ್ದ.

2018ರ ಆಗಸ್ಟ್‌ನಲ್ಲಿ ನವೀನ್ ದಲಾಲ್ ಹಾಗೂ ದರ್ವೇಶ್ ಶಾಹ್‌ಪುರ್ ದಿಲ್ಲಿ ಕಾನ್‌ಸ್ಟಿಟ್ಯೂಶನ್ ಕ್ಲಬ್ ಹೊರಗಡೆ ಖಾಲಿದ್ ಮೇಲೆ ಗುಂಡು ಹಾರಿಸಿದ್ದರು. ಬಂದೂಕು ಜಾಮ್ ಆದ ಕಾರಣ ಖಾಲಿದ್ ಈ ದಾಳಿಯಿಂದ ತಪ್ಪಿಸಿಕೊಂಡಿದ್ದರು. ದಲಾಲ್ ಹಾಗೂ ಶಾಹ್‌ಪುರ್ ಘಟನೆ ನಡೆದ ತಕ್ಷಣ ತಪ್ಪಿಸಿಕೊಂಡಿದ್ದರು. ವಿಡಿಯೋ ಬಿಡುಗಡೆ ಮಾಡಿದ್ದ ಆರೋಪಿಗಳು ಈ ದಾಳಿಯು ದೇಶಕ್ಕೆ ಸ್ವಾತಂತ್ರೋತ್ಸವದ ಕೊಡುಗೆ ಎಂದಿದ್ದರು.

ಘಟನೆ ನಡೆದು ಮೂರು ಗಂಟೆಯ ಬಳಿಕ ಹರ್ಯಾಣದ ವಿಶೇಷ ತನಿಖಾ ತಂಡ ಈ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿತ್ತು. ಗನ್ ದಾಳಿ ಪ್ರಕರಣದಲ್ಲಿ ನವೀನ್ ದಲಾಲ್ ಜಾಮೀನು ಪಡೆದು ಹೊರ ಬಂದಿದ್ದು, ಪ್ರಕರಣ ಸೆಷನ್ಸ್ ನ್ಯಾಯಾಲಯದಲ್ಲಿದೆ.

ರಾಷ್ಟ್ರವಾದ ಮತ್ತು ಗೋರಕ್ಷಣೆ ಕುರಿತು ತನ್ನ ಮತ್ತು ಪಕ್ಷದ ಸಿದ್ಧಾಂತಗಳು ಒಂದೇ ಆಗಿರುವುದರಿಂದ ತಾನು ಆರು ತಿಂಗಳ ಹಿಂದೆ ಶಿವಸೇನೆಗೆ ಸೇರ್ಪಡೆಗೊಂಡಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ರೈತರು, ಹುತಾತ್ಮರು, ಗೋವುಗಳು ಮತ್ತು ಬಡವರಿಗಾಗಿ ಏನನ್ನೂ ಮಾಡುವುದಿಲ್ಲ. ಅವು ರಾಜಕೀಯದಲ್ಲಷ್ಟೇ ಆಸಕ್ತಿ ಹೊಂದಿವೆ ಎಂದು ಸ್ವಘೋಷಿತ ಗೋರಕ್ಷಕ ದಲಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾನೆ.

ದಲಾಲ್ ಉಮೇದುವಾರಿಕೆಯನ್ನು ದೃಢಪಡಿಸಿದ ಶಿವಸೇನೆಯ ದಕ್ಷಿಣ ಹರ್ಯಾಣ ಅಧ್ಯಕ್ಷ ವಿಕ್ರಮ ಯಾದವ ಅವರು,ದಲಾಲ್ ಗೋರಕ್ಷಣೆಯಂತಹ ವಿಷಯಗಳಲ್ಲಿ ಹೋರಾಡುತ್ತಿದ್ದಾನೆ ಮತ್ತು ದೇಶವಿರೋಧ ಘೋಷಣೆಗಳನ್ನು ಕೂಗುವವರ ವಿರುದ್ಧ ಧ್ವನಿಯೆತ್ತುತ್ತಿದ್ದಾನೆ. ಆತ ಖಾಲಿದ್ ಜೊತೆ ವೈಯಕ್ತಿಕ ದ್ವೇಷ ಹೊಂದಿಲ್ಲ ಮತ್ತು ಜೆಎನ್‌ಯುದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರ ಬಗ್ಗೆ ಆಕ್ರೋಶಗೊಂಡಿದ್ದ. ಆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯೂ ಆತನಿಗೆ ಅಸಮಾಧಾನವನ್ನುಂಟು ಮಾಡಿತ್ತು ಎಂದು ಹೇಳಿದರು.

 2018,ಆ.18ರಂದು ದಲಾಲ್ ಮತ್ತು ಇನ್ನೋರ್ವ ಆರೋಪಿ ದರ್ವೇಶ ಶಾಹಪುರ್ ದಿಲ್ಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನ ಹೊರಗೆ ಖಾಲಿದ್ ಮೇಲೆ ಎರಡು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದರು. ಗುಂಡೇಟಿನಿಂದ ಖಾಲಿದ್ ತಪ್ಪಿಸಿಕೊಂಡಿದ್ದರು. ದಾಳಿಯು ದೇಶಕ್ಕೆ ಸ್ವಾತಂತ್ರೋತ್ಸವದ ಕೊಡುಗೆಯಾಗಿದೆ ಎಂಬ ಸಂದೇಶದೊಂದಿಗೆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣವು ಸೆಷನ್ಸ್ ಕೋರ್ಟ್‌ನಲ್ಲಿ ಬಾಕಿಯಿದ್ದು,ದಲಾಲ್ ಜಾಮೀನಿನಲ್ಲಿ ಹೊರಗಿದ್ದಾನೆ.

ಖಾಲಿದ್ ಮೇಲಿನ ದಾಳಿಯಲ್ಲಿ ತಾನು ಭಾಗಿಯಾಗಿದ್ದರ ಬಗ್ಗೆ ಮಾತನಾಡಲು ನಿರಾಕರಿಸಿರುವ ದಲಾಲ್,ಅದು ಕೇವಲ ಖಾಲಿದ್ ಕುರಿತಲ್ಲ. ಆ ಬಗ್ಗೆ ಮುಂದೊಂದು ದಿನ ತಾನು ಮಾತನಾಡುತ್ತೇನೆ ಎಂದು ಹೇಳಿದ್ದಾನೆ. ದಲಾಲ್ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ,ಅದು ಆತನ ರಾಷ್ಟ್ರಭಕ್ತಿಯ ಪ್ರದರ್ಶನದ ರೀತಿಯಾಗಿತ್ತು ಎಂದಿದೆ.

ಖಾಲಿದ್ ಮೇಲಿನ ದಾಳಿ ಸೇರಿದಂತೆ ತನ್ನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಬಾಕಿಯಿವೆ ಎಂದು ದಲಾಲ್ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News