ಪವಿತ್ರ ಆರ್ಥಿಕತೆಗಾಗಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸರಕಾರ ಸ್ಪಂದಿಸಲಿ: ಎಚ್.ಡಿ.ದೇವೇಗೌಡ

Update: 2019-10-09 17:05 GMT

ಬೆಂಗಳೂರು, ಅ.9: ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಕೂಡಲೇ ಸ್ಪಂದಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ನಗರದ ವಲಭನಿಕೇತನದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ನಾಲ್ಕು-ಐದು ದಿನದಿಂದ ಪ್ರಸನ್ನ ಪವಿತ್ರ ಆರ್ಥಿಕತೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿದೆ. ಸರಕಾರ ಕೂಡಲೇ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು.

ಅ.2ರಿಂದ ಗ್ರಾಮೀಣ ಕಸುಬು, ಗುಡಿ ಕೈಗಾರಿಕೆಗಳಿಗೆ ಶೂನ್ಯ ತೆರಿಗೆ ವಿಧಿಸಬೇಕೆಂದು ಒತ್ತಾಯಿಸಿ ಪ್ರಸನ್ನ ಸೇರಿದಂತೆ ಗ್ರಾಮ ಸೇವಾ ಸಂಘದ ಹಲವು ಮಂದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಸರಕಾರ ಮಾತ್ರ ಇತ್ತ ಗಮನ ಕೊಡದಿರುವುದು ಖಂಡನೀಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಗಾಂಧೀಜಿ ನಂತರದಲ್ಲಿ ದೇಶದ ಹಿತಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರು ಕೆಲವೇ ಮಂದಿ. ಅದರಲ್ಲಿ ರಂಗಕರ್ಮಿ ಪ್ರಸನ್ನ ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ತಯಾರಿಸುವ ಹಾಗೂ ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಬೇಕು ಎಂಬ ರಂಗಕರ್ಮಿ ಪ್ರಸನ್ನರ ಬೇಡಿಕೆಗೆ ನನ್ನ ಸಹಮತವಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News